ಶನಿವಾರಸಂತೆ, ಮೇ 13: ಶನಿವಾರಸಂತೆಯ ಸಮೀಪದ ನಂದಿಗುಂದ ಗ್ರಾಮದ ಅಂಚೆ ಕಚೇರಿ ಸಮೀಪ ಗುರುವಾರ ರಾತ್ರಿ ಟ್ರಾಕ್ಟರ್ (ಕೆಎ-12-ಟಿ-5551) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಡಿಕ್ಕಿಯಾಗಿದ್ದು, ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೂಗೂರು ಗ್ರಾಮದ ಎ.ಎ. ಗಣೇಶ ಅವರ ಪುತ್ರ ಕೇಶವ (30) ಹಾಗೂ ಕೃಷ್ಣಮೂರ್ತಿ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಶನಿವಾರಸಂತೆಯ ಸಣ್ಣಯ್ಯ ಎಂಬಾತ ಚಾಲಿಸುತ್ತಿದ್ದ ಟ್ರ್ಯಾಕ್ಟರ್ ಇಬ್ಬರಿಗೂ ಡಿಕ್ಕಿಪಡಿಸಿದೆ. ಪರಿಣಾಮ ಕೇಶವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಕೃಷ್ಣಮೂರ್ತಿಗೆ ಬಲಪಕ್ಕೆಗೆ ಮತ್ತು ಶರೀರದ ಭಾಗಗಳಿಗೆ ಗಾಯ ಉಂಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮಶೇಖರ್ ಅವರು ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಎಸ್.ಎಸ್. ರವಿಕಿರಣ್ ಚಾಲಕ ಹಾಗೂ ಟ್ರ್ಯಾಕ್ಟರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.