ಮಡಿಕೇರಿ, ಜೂ. 16: ಕೊಡ್ಲಿಪೇಟೆ, ಶನಿವಾರಸಂತೆ ವಿಭಾಗದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಹಾಗೂ ಸಾಗಾಟದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸೂಚನೆಯಂತೆ ಜಿಲ್ಲಾ ಅಪರಾಧ ಪತ್ತೆದಳದ ತಂಡ ಈ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದೆ. ಪೊಲೀಸರ ಕಾರ್ಯಾ ಚರಣೆ ಸಂದರ್ಭ ಕೊಡ್ಲಿಪೇಟೆ ಕಡೆಯಿಂದ ಹ್ಯಾಂಡ್ಪೋಸ್ಟ್ ರಸ್ತೆಗಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದು
(ಕೆಎ 07 ಎ 450) ಪತ್ತೆಯಾಗಿದೆ. ಈ ಲಾರಿಯ ಪರವಾನಗಿ ಕುರಿತು ಪರಿಶೀಲಿಸಿದ ಸಂದರ್ಭ ಇದು ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ನೀಡಿರುವ ಪರವಾನಗಿ ಎಂದು ತಿಳಿದುಬಂದಿದೆ. ಆದರೆ ಈ ಪರವಾನಗಿ ನೈಜವಾದುದಲ್ಲ ಎಂಬ ಸಂಶಯ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಈ ಲಾರಿ ಹಾಗೂ ಚಾಲಕ ಮೈಸೂರಿನ ವಿಜಯಕುಮಾರ್ ಭೇರ್ಯ ಎಂಬವರನ್ನು ಡಿ.ಸಿ.ಐ.ಬಿ. ತಂಡ ವಶಕ್ಕೆ ತೆಗೆದುಕೊಂಡಿದೆ. ಅಕ್ರಮವಾಗಿ ಮರಳು ಕಳ್ಳ ಸಾಗಾಟದ ಗುಮಾನಿಯಂತೆ ಲಾರಿ ಹಾಗೂ ಬಂಧಿತ ವ್ಯಕ್ತಿಯನ್ನು ಕೊಡ್ಲಿಪೇಟೆ ಉಪ ಠಾಣಾಧಿಕಾರಿಯ ವಶಕ್ಕೆ ಒಪ್ಪಿಸಲಾಗಿದೆ. ಪರವಾನಗಿಯ ನೈಜತೆಯ ಬಗ್ಗೆ
ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಡಿಕೇರಿಯ ಹಿರಿಯ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ದಾಸ್ತಾನು ಇರುವ ಬಗ್ಗೆ ಖಾತರಿಯಾಗಿದ್ದು, 8 ಕಡೆಗಳಲ್ಲಿ ದಾಸ್ತಾನಿರಿಸಿದ್ದ 88 ಲೋಡ್ಗಳಷ್ಟು ಮರಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗಿದೆ. ಇನ್ನು ಹಲವಾರು ಕಡೆಗಳಲ್ಲಿ ಅಕ್ರಮ ಮರಳು ದಾಸ್ತಾನಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಮಾಹಿತಿ ಬಂದಿದ್ದು, ಈ ಬಗ್ಗೆ ಕಾರ್ಯಾಚರಣೆ ನಡೆಸಲು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ. ಇನ್ಸ್ಪೆಕ್ಟರ್ ಲಿಂಗಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್ ಹಾಗೂ ಶನಿವಾರಸಂತೆ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.