ಮಡಿಕೇರಿ, ಜೂ. 27: ಮಾದಕ ವಸ್ತುಗಳ ಬಳಕೆಯಿಂದ ಯುವಜನತೆ ದೂರವಿರುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸಲಹೆ ನೀಡಿದ್ದಾರೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಶಕ್ತ್ತಿಧಾಮ ಆಸ್ಪತ್ರೆ ವತಿಯಿಂದ ನಗರ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸರ್ಕಾರಿ ಪಧವಿ ಪೂರ್ವ ಕಾಲೇಜು ಮಡಿಕೇರಿ ಇವರ ಸಂಯುಕ್ತಾಶ್ರದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಮತ್ತು ಅಕ್ರಮ ಮಾದಕ ವಸ್ತು ಸಾಗಾಣಿಕೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ.ದೇವಿ ಆನಂದ್ ಮಾತನಾಡಿ ದೇಶದ ಜನಸಂಖ್ಯೆಯಲ್ಲಿ ಯುವಕರ ಪ್ರಮಾಣ ಹೆಚ್ಚಿದೆ. ಮಾದಕ ವಸ್ತುಗಳ ಸೇವನೆಗೆ ತುತ್ತಾದಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ. ಇತ್ತೀಚಿನ ಆರೋಗ್ಯ ಸಮೀಕ್ಷೆಯ ಪ್ರಕಾರ ಪ್ರಪಂಚದಲ್ಲಿ ಹಲವು ಮಿಲಿಯನ್ ಜನರು ಮಾದಕ ವಸ್ತು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತ್ತಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮಾದಕ ವಸ್ತುವಿನ ಬಳಕೆಯಿಂದ ಪ್ರತಿವರ್ಷ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ತಜ್ಞರಾದ ಡಾ.ರೂಪೇಶ್ ಅವರು ಮಾತನಾಡಿ ಮಧ್ಯ ವಯಸ್ಸಿನ ಜನರು ಹೆಚ್ಚಾಗಿ ಮಾದಕ ಪದಾರ್ಥಗಳನ್ನು ಬಳಸುತ್ತಿದ್ದಾರೆ ಇದರಿಂದ ಮಾನಸಿಕ ಕಿನ್ನತೆ, ನಿದ್ರೆ ಹೀನತೆಗಳನ್ನು ಒಳಗೊಂಡಂತೆ ತೀವ್ರತರವಾದ ಮಾನಸಿಕ ತೊಂದರೆಗಳು ಒಳಗೊಂಡಂತೆ ಕ್ಯಾನ್ಸರ್‍ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರಿಂದ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಮೋಹನ್‍ಪ್ರಭು ಮಾತನಾಡಿ ಪ್ರತಿಯೊಬ್ಬರೂ ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.