ಸೋಮವಾರಪೇಟೆ, ಜೂ. 28: ತಾಲೂಕಿನ ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಐಗೂರು, ಕುಂಬೂರು, ಮಾದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ವಾಸದ ಮನೆ, ಕೃಷಿ ಫಸಲಿಗೆ ಹಾನಿ ಮಾಡುತ್ತಿವೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದು, ಆನೆಗಳ ಆರ್ಭಟಕ್ಕೆ ಜನತೆ ಕಂಗಾಲಾಗಿದ್ದಾರೆ.

ಕಳೆದ ಎರಡು ಮೂರು ದಿನಗಳಲ್ಲಿ ಬಿಳಿಗೇರಿ, ನಂದಿಮೊಟ್ಟೆ, ಗುಂಡುಗುಟ್ಟಿ ವ್ಯಾಪ್ತಿಯ ಕಾಫಿ ತೋಟ, ಬಾಳೆ ಗಿಡಗಳು ಸೇರಿದಂತೆ ಹಲವು ಬೆಳೆಗಳನ್ನು ಕಾಡಾನೆಗಳು ನಾಶಪಡಿಸಿವೆ. ಮಂಕ್ಯ ಗ್ರಾಮ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಹಿಮ್ಮೆಟ್ಟಿಸಲು ಗ್ರಾಮಸ್ಥರು ಹರಸಾಹಸ ನಡೆಸಿ ಕೈಚೆಲ್ಲಿ ಕುಳಿತಿದ್ದಾರೆ.

ಕಾಜೂರು ಗ್ರಾಮದ ಲಕ್ಷ್ಮಿ, ಚಂದ್ರ ಅವರುಗಳ ವಾಸದ ಮನೆ ಮೇಲೆ ಧಾಳಿ ನಡೆಸಿದ್ದ ಕಾಡಾನೆಗಳು, ಇದೀಗ ಬಿಳಿಗೇರಿ ಹಾಗು ನಂದಿಮೊಟ್ಟೆ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದು, ಬೆಳೆಗಾರರಾದ ಮಾದಪ್ಪ, ರಾಜು ಹಾಗು ಕುಟ್ಟಪ್ಪ ಅವರಿಗೆ ಸೇರಿದ ಕಾಫಿ ತೋಟಕ್ಕೆ ಧಾಳಿ ಮಾಡಿವೆ. ತೋಟದಲ್ಲಿದ್ದ ಕಾಫಿ, ಬಾಳೆ ಗಿಡಗಳು ನಷ್ಟಗೊಂಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವನಪಾಲಕ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ನಾಶಪಡಿಸಿದರೆ, ಮುಂದಿನ ದಿನಗಳಲ್ಲಿ ಜೀವನ ಸಾಗಿಸುವದೇ ಕಷ್ಟವಾಗುತ್ತದೆ. ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಕಾಡಾನೆ ಹಾವಳಿಯನ್ನು ಕೂಡಲೇ ನಿಯಂತ್ರಿಸದಿದ್ದಲ್ಲಿ ರೈತರು ಬೀದಿ ಪಾಲಾಗಬೇಕಾಗುತ್ತದೆ ಎಂದು ಬೆಳೆಗಾರ ಮಾದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಸೋಮವಾರದಂದು ಗುಂಡುಗುಟ್ಟಿ ಸಮೀಪದ ತೋಟಗಳಿಗೆ ಧಾಳಿ ನಡೆಸಿರುವ ಕಾಡಾನೆ ಹಿಂಡು ಭಾರೀ ನಷ್ಟಕ್ಕೆ ಕಾರಣವಾಗಿದ್ದು, ರೈತರು ಹಾಗೂ ಸುತ್ತಮುತ್ತಲಿನ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದೂ ಅಲ್ಲದೇ ಓಂ ಶಕ್ತಿ, ಎ.ಜೆ.ಎಸ್ಟೇಟ್ ಹಾಗೂ ಜಂಬೂರು ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಮತ್ತಷ್ಟು ಆತಂಕ ಮೂಡಿಸಿವೆ.