ಕುಶಾಲನಗರ, ಜೂ. 28: ಸಾಹಿತಿಗಳು ತಮ್ಮ ಮನದಾಳದಲ್ಲಿ ಅಡಗಿರುವ ಅನುಭವಗಳಿಗೆ ಉತ್ತಮ ಆಕಾರ ನೀಡಿ ಹೊರತರುವ ಮೂಲಕ ಅಕ್ಷರಗಳಿಗೆ ಹೆಚ್ಚಿನ ಅರ್ಥ ಕಲ್ಪಿಸಲು ಸಾಧ್ಯ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಅರಣ್ಯ ಇಲಾಖೆ ಸಹಯೋಗದೊಂದಿಗೆ ಕಾವೇರಿ ನಿಸರ್ಗಧಾಮದಲ್ಲಿ ಹಮ್ಮಿಕೊಂಡಿದ್ದ ಪ್ರಸ್ತುತ ಭಾರತದ ಸುಡುವಾಸ್ತವಗಳು-ಸಾಹಿತ್ಯ ಲೋಕದ ಪ್ರತಿಕ್ರಿಯೆ ವಿಚಾರದಡಿಯಲ್ಲಿ ನಡೆದ ಯುವ ಬರಹಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬರವಣಿಗೆ ಎಂಬದು ವ್ಯಕ್ತಿಯಲ್ಲಿ ಅಡಿಗಿರುವ ಅತ್ಯುತ್ತಮವಾದ ಕೌಶಲ್ಯವಾಗಿದೆ. ಚಿಂತನ ಮಂಥನಗಳ ನಡುವೆ ವಾಸ್ತವಾಂಶದ ಪ್ರಜ್ಞೆಯ ಆಧಾರದ ಮೇಲೆ ಸಾಹಿತ್ಯಗಳು ರಚನೆಗೊಳ್ಳ ಬೇಕಿದೆ. ಯಾವದೇ ವಿಚಾರದ ವಾಸ್ತವತೆಯ ಅರಿವಿಲ್ಲದ ಓರ್ವ ವ್ಯಕ್ತಿ ಇತಿಹಾಸ ಹಾಗೂ ಭಾವಿ ವಿಚಾರಗಳ ಕುರಿತು ನಡೆಸುವ ವಿಶ್ಲೇಷಣೆ ಅರ್ಥಹೀನವಾದದ್ದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಸಮೂಹ ಚಿಂತನಾಶೀಲ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಇತರೇ ವಿಚಾರವಾಗಿ ಯುವಸಮೂಹದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ದಾರಿ ತಪ್ಪುತ್ತಿರುವ ಯುವಪೀಳಿಗೆಗೆ ಉತ್ತಮ ಮಾರ್ಗ ದರ್ಶನ ನೀಡುವ ಕಾರ್ಯವಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಎಲ್ಲಾ ಪ್ರಕಾರ ಗಳಲ್ಲಿ ಕಮ್ಮಟಗಳ ಆಯೋಜಿಸುವ ಮೂಲಕ ಯುವಸಮೂಹವನ್ನು ಸಾಹಿತ್ಯಿಕವಾಗಿ ಕ್ರಿಯಾತ್ಮಕಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮಾತನಾಡಿ, ಬರಹಗಾರರು ಪ್ರಕೃತಿ ಹಾಗೂ ಮನವನ ನಡುವೆ ಉತ್ತಮ ಬಾಂಧವ್ಯ ಬೆಸಯುವ ಸಾಹಿತ್ಯಗಳ ರಚನೆಯತ್ತ ಚಿಂತನೆ ಹರಿಸಬೇಕಿದೆ ಎಂದರು.

ಶಿಬಿರದ ನಿರ್ದೇಶಕ ಡಾ.ಕಾಳೇಗೌಡ ನಾಗವಾರ ಪ್ರಾಸ್ತಾವಿಕ ನುಡಿಗಳಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ, ಸದಸ್ಯ ಸಂಚಾಲಕ ಮಹೇಶ್ ಹರವೆ, ಸಾಹಿತಿ ಡಾ.ಜೆ. ಸೋಮಣ್ಣ, ಎಂ.ಇ. ಮೊಯಿದ್ದೀನ್ ಇದ್ದರು. 3 ದಿನಗಳ ಕಾರ್ಯಕ್ರಮದಲ್ಲಿ ಪ್ರಥಮ ದಿನದ ವಿಚಾರಗೋಷ್ಠಿಯಲ್ಲಿ `ಸಮಕಾಲೀನ ಭಾರತೀಯ ಸಾಹಿತ್ಯ ಮತ್ತು ಸಾಮಾಜಿಕ ವಾಸ್ತವಗಳು' ಎಂಬ ವಿಚಾರದ ಡಾ. ರಾಜೇಂದ್ರ ಚೆನ್ನಿ, ಹಾಗೂ `ಸಾಹಿತ್ಯಲೋಕ ಮತ್ತು ಸಮಕಾಲೀನ ರಾಜಕೀಯ ಪರ್ಯಾಯಗಳು' ವಿಚಾರದ ಕುರಿತು ಡಾ. ನಟರಾಜ ಹುಳಿಯಾರ್ ಬರಹಗಾರರೊಡನೆ ಸಂವಾದ ನಡೆಸಿದರು.