ಸೋಮವಾರಪೇಟೆ, ಜೂ. 24 : ಸರ್ಕಾರದ ವತಿಯಿಂದ ಬಿಡುಗಡೆ ಯಾಗುವ ಅನುದಾನದಲ್ಲಿ ಕೈಗೊಳ್ಳ ಲಾಗುವ ಕಾಮಗಾರಿಗಳು ಕಳಪೆ ಯಾಗಲು ಕೆಲವು ರಾಜಕಾರಣಿಗಳು ಗುತ್ತಿಗೆದಾರ ರಾಗಿರುವದೇ ಕಾರಣ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ದೂರಿದರು.

ಸ್ಥಳೀಯ ತಾ. ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ಹಲವು ಕಡೆ ರಾಜಕಾರಣಿಗಳು ಗುತ್ತಿಗೆದಾರ ರಾಗಿರುವದರಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಯಾವ ಗುತ್ತಿಗೆದಾರ ಟೆಂಡರ್‍ನಲ್ಲಿ ಭಾಗವಹಿಸಿರುತ್ತಾನೆಯೋ ಅಂತಹವರೇ ಗುತ್ತಿಗೆಯನ್ನು ಪಡೆದು ಕೆಲಸ ಮಾಡಬೇಕು. ಇತರರ ಪರವಾನಿಗೆಯಲ್ಲಿ ಕಾಮಗಾರಿ ನಡೆಸಿ ಕಳಪೆ ಕೆಲಸ ಮಾಡಿದರೆ ಮೂಲ ಪರವಾನಗಿ ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವದು ಎಂದರು.

ಕಿರಗಂದೂರು, ಶಾಂತಳ್ಳಿ, ಹಾನಗಲ್ಲು, ಬೀದಳ್ಳಿ, ಪುಷ್ಪಗಿರಿ, ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಕಳಪೆಯಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆ ಈ ರಸ್ತೆಯನ್ನು ತಕ್ಷಣ ಪರಿಶೀಲಿಸಬೇಕೆಂದು ಲೋಕೋಪಯೋಗಿ ಇಲಾಖಾ ಅಭಿಯಂತರರಿಗೆ ಸೂಚನೆ ನೀಡಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಭವನದ ಕಟ್ಟಡ ಕಾಮಗಾರಿ ಅಪೂರ್ಣವಾಗಿದ್ದು, ಈ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯ, ಕ್ರೀಡಾ ಶಾಲೆ, ದೇವರಾಜು ಅರಸು ಭವನ ಅಥವಾ ಕನ್ನಡ ಭವನವನ್ನು ನಿರ್ಮಿಸುವದು ಸೂಕ್ತ ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ದೇವರಾಜು ಅರಸು ಭವನ ನಿರ್ಮಾಣಕ್ಕೆ ಸರ್ಕಾರ ಇಲಾಖೆಯ ಮೂಲಕ ಹಣ ಬಿಡುಗಡೆ ಮಾಡುತ್ತದೆ, ಇದನ್ನು ಪರಿಶೀಲಿಸಬಹುದು ಎಂದರು.

ಮೀನುಗಾರಿಕೆ ಇಲಾಖೆಯ ಕ್ರಿಯಾ ಯೋಜನೆ ಇನ್ನೂ ತಯಾರಾಗಿಲ್ಲ. ಇದಕ್ಕೆ ಸಂಬಂಧಿಸಿ ದಂತೆ ಇಲಾಖೆಯ ಮೇಲಧಿಕಾರಿಗಳ ಅಭಿಪ್ರಾಯವನ್ನು ಕೇಳಬೇಕಾಗಿದೆ ಎಂದು ಅಭಿಮನ್ಯುಕುಮಾರ್ ಸಭೆಯ ಗಮನಕ್ಕೆ ತಂದರು. ಮಾದಾಪುರ ಮತ್ತು ನಂಜರಾಯಪಟ್ಟಣದಲ್ಲಿ ಆರೋಗ್ಯ ಇಲಾಖೆಯ ನೂತನ ಕಟ್ಟಡ ಇನ್ನೂ ಉದ್ಘಾಟನೆಗೊಂಡಿಲ್ಲ. ಶೀಘ್ರದಲ್ಲಿಯೇ ಇದನ್ನು ಸಾರ್ವಜನಿಕ ಸೇವೆಗೆ ನೀಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಸುಪರ್ಣ ಅವರಿಗೆ ಸೂಚನೆ ನೀಡಲಾಯಿತು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ತಾಲೂಕಿನ 11 ಪ್ರೌಢಶಾಲೆಗಳಲ್ಲಿ ನಿರ್ಮಿಸಲಾದ ಹೆಚ್ಚುವರಿ ಕಟ್ಟಡ ಅಪೂರ್ಣ ಗೊಂಡಿದ್ದು, ಈ ಕುರಿತು ಇಲಾಖಾ ನಿರ್ದೇಶಕರಿಗೆ ಪತ್ರ ಬರೆದು ಕಾರಣ ಕೇಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಾಮಾಜಿಕ ಅರಣ್ಯ, ಸಹಕಾರ, ಅಬ್ಕಾರಿ, ಕಾರ್ಮಿಕ, ಚೆಸ್ಕಾಂ, ಆಹಾರ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ವಿಜು ಚಂಗಪ್ಪ, ಮಣಿ, ಸಬಿತ ಚನ್ನಕೇಶವ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು.