ಮಡಿಕೇರಿ, ಜೂ. 24: ಚೆಯ್ಯಂಡಾಣೆಯ ನಿವಾಸಿ ಶಾಂತಪ್ಪ ರೈ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಿನ ಠಾಣಾಧಿಕಾರಿ ವೆಂಕಟೇಶ್ ಅವರು ನೈಜ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿರುವವರು ಅಮಾಯಕರಲ್ಲ. ಇವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಪೋಷಕರ ಆರೋಪ ಸುಳ್ಳು ಮಾಹಿತಿಯಾಗಿದೆ ಎಂದು ಆ ವಿಭಾಗದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿರುವ ಸಾರ್ವಜನಿಕ ಪ್ರಮುಖರು ಶಾಂತಪ್ಪ ರೈ ಮುಗ್ಧ ವ್ಯಕ್ತಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಸದಭಿಪ್ರಾಯವಿದೆ. ಹಲ್ಲೆ ನಡೆಸಿದ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳೂ ಇದ್ದಾರೆ. ಕೃತ್ಯದ ಬಳಿಕ ಆರೋಪಿಗಳು ಆಗಿನ ಎಸ್‍ಐಯ ಕೃಪಾಕಟಾಕ್ಷದೊಂದಿಗೆ ಮೂರು ತಿಂಗಳು ತಲೆಮರೆಸಿಕೊಂಡಿದ್ದರು. ಈಗಿನ ಎಸ್‍ಐ ವೆಂಕಟೇಶ್ ಅವರು ಅಧಿಕಾರ ವಹಿಸಿಕೊಂಡ ಬಳಿಕವಷ್ಟೇ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂದು ಸಮರ್ಥಿಸಿದ್ದಾರೆ.

ಶಾಂತಪ್ಪ ರೈ ಹಾಗೂ ಅವರ ಪತ್ನಿ ಅನ್ಯೋನ್ಯವಾಗಿಯೇ ಇದ್ದಾರೆ. ಆದರೂ ಹಲ್ಲೆಯಲ್ಲಿ ಪತ್ನಿಯ ಕೈವಾಡವಿದೆ ಎಂಬಂತೆ ಆರೋಪ ಮಾಡಿರುವದು ಸಂಸಾರ ಒಡೆಯುವ ಪ್ರಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರುಗಳು ಪತ್ನಿಯ ಮೇಲಿನ ಆರೋಪ ಶುದ್ಧ ಸುಳ್ಳಾಗಿದೆ. ಆರೋಪಿಗಳಿಗೆ ಚೆಯ್ಯಂಡಾಣೆ ವಿಭಾಗದ ಸಾರ್ವಜನಿಕರು ಜಾಮೀನು ನೀಡಲು ಸಹ ಹಿಂದೇಟು ಹಾಕಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.