ಮಡಿಕೇರಿ, ಮಾ. 29: ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ತಾ. 30 ರಂದು (ಇಂದು) ದೆಹಲಿಯಲ್ಲಿ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆ ಜಾರಿಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಸಮಾವೇಶ ನಡೆಯಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಉಪಾಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು 3ನೇ ಹಾಗೂ 4ನೇ ದರ್ಜೆ ನೌಕರೆಂದು ಕೇಂದ್ರ ಸರ್ಕಾರ ಪರಿಗಣಿಸಿ ಅವರಿಗೆ ಮಾಸಿಕ 18 ಸಾವಿರ ಹಾಗೂ 10 ಸಾವಿರ ವೇತನವನ್ನು ನೀಡಬೇಕೆಂದು ಜಂಟಿ ಕ್ರಿಯಾ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದೆ.
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘಗಳ ಒಕ್ಕೂಟದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಅಂಗನವಾಡಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಎ.ಜೆ. ತಾರಾಮಣಿ ವಹಿಸಿದ್ದರು. ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದು, ಕಳೆದ 3 ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗೌರವಧನ ಏರಿಸಲಿಲ್ಲ. ದೇಶದಲ್ಲಿ ಅಲ್ಪ ಸಂಬಳದಲ್ಲಿ ದುಡಿಯುತ್ತಿರುವ ಕಾರ್ಯಕರ್ತೆ ಹಾಗೂ ಸಹಾಯಕಿರನ್ನು ಸರ್ಕಾರ ಶೋಷಣೆ ಮಾಡುತ್ತಿದೆ. ರಾಜ್ಯ ಸರ್ಕಾರ ಕಳೆದ 2 ಮುಂಗಡ ಪತ್ರದಲ್ಲಿ ತಲಾ 500 ಹಾಗೂ 250 ನೀಡಿ ಸಹಕರಿಸಿದರೆ, ಈ ಬಾರಿ ವೇತನ ಏರಿಸದೆಯಿರುವದರಿಂದ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಅನ್ಯಾಯವಾಗಿದೆ ಎಂದರು.
ತಾಲೂಕು ಅಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿ ಇಲಾಖೆ ವಿತರಿಸುವ ಪೌಷ್ಠಿಕ ಆಹಾರಗಳಲ್ಲಿ ಬೇರೆ ಜಿಲ್ಲೆಗಳಂತೆ ಪ್ಯಾಕೇಟ್ನಲ್ಲಿ ವಿತರಿಸಬೇಕು, ಬೇಸಿಗೆ ರಜೆಯನ್ನು 15 ರಿಂದ ಒಂದು ತಿಂಗಳಿಗೆ ವಿಸ್ತರಿಸಬೇಕು. ಆರೋಗ್ಯ ಇಲಾಖೆ ಕಿಶೋರಿಯರಿಗೆ ಹಾಗೂ ಮಹಿಳೆಯರಿಗೆ ವಿತರಿಸುವ ಶುಚಿ ಕಿಟ್ಗಳನ್ನು ಗ್ರಾಮದ ದಾದಿಯರ ಮೂಲಕ ವಿತರಿಸುವ ಅಂಗನವಾಡಿ ಕಾರ್ಯಕರ್ತೆಯರನ್ನು ಇದರಿಂದ ಮುಕ್ತಿಗೊಳಿಸಬೇಕು. ಜಂತುಹುಳು ಕಾರ್ಯಕ್ರಮದಲ್ಲಿ ತರಬೇತಿ ಪಡೆದು ಭಾಗವಹಿಸಿದವರಿಗೆ ಗೌರವ ಸಂಭಾವನೆ ನೀಡಲಿಲ್ಲ. ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ವಿತರಿಸಲು ಬಂದಿರುವ ಸಮವಸ್ತ್ರ ಕಳಪೆಯಿಂದ ಕೂಡಿದ್ದು, ಅದನ್ನು ಧರಿಸುವದಿಲ್ಲವೆಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಪುಷ್ಪಾವತಿ ಸ್ವಾಗತಿಸಿ, ಕೋಶಾಧಿಕಾರಿ ಎನ್.ಎ. ಗೀತಾ ಲೆಕ್ಕಪತ್ರ ಮಂಡಿಸಿದರು. ಸಹಕಾರ್ಯದರ್ಶಿ ಅರ್ಚನಾ ವಂದಿಸಿದರು. ಮಡಿಕೇರಿ ತಾಲೂಕು ಅಧ್ಯಕ್ಷೆ ಎಂ.ಸಿ. ಅಕ್ಕಮ್ಮ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಸುಮಿತ್ರ ಬಾಯಿ, ಕ್ಷೇಮಾನಿಧಿ ಅಧ್ಯಕ್ಷೆ ಪಾರ್ವತಿ ಇನ್ನಿತರರು ಸಭೆಯಲ್ಲಿ ಮಾತನಾಡಿದರು.