ಮಡಿಕೇರಿ ಜೂ.23: ಅಬ್ಬಾ.. ಏನಿದು ಛಳಿ..ರಾತ್ರಿ ವೇಳೆ ಮೈಕೊರೆಯುವ ನಡುಕ. ಕಂಬಳಿ ಹೊದ್ದು ಮುಸುಕು ಹಾಕಿ ಮಲಗುವ ತವಕ. ಬೆಳಿಗ್ಗೆ ಏಳು ಗಂಟೆಯಾದರೂ ಏಳಬೇಕೆ ನಿಸುವದಿಲ್ಲ. ಮಂಜು ಮುಸುಕಿದ ಕತ್ತಲು ಇನ್ನೂ ರಾತ್ರಿ ಕಳೆದಿಲ್ಲ ಎನ್ನುವ ಭಾವನೆ. ಇದು ಈಗಿನ ಮಡಿಕೇರಿಯ ಚಿತ್ರಣ.

ವಾತಾವರಣ ಗಮನಿಸಿದಾಗ ಉಷ್ಣಾಂಶ ತೀರಾ ಕುಸಿದಿರಬಹುದು ಎನ್ನುವ ಕಲ್ಪನೆ ಮೂಡುವದು ಸಹಜ. ಆದರೆ, ನೈಜ ಪರಿಸ್ಥಿತಿ ಹೀಗಿಲ್ಲ. ನಗರದಲ್ಲಿ 16 ಹಾಗೂ 17o ಸೆಲ್ಶಿಯಸ್ ಉಷ್ಣಾಂಶವಿದ್ದು ಮಂಜು ಮತ್ತು ಗಾಳಿಯಿಂದಾಗಿ ಈ ತಣ್ಣಗಿನ ಅನುಭವವುಂಟಾಗುತ್ತಿದೆ.

ಮಡಿಕೇರಿ ನಗರಕ್ಕೆ ಮಾಜಿ ಪುರಸಭಾಧ್ಯಕ್ಷ ಕೆ.ಎಸ್. ದೇವಯ್ಯ ಅವರಲ್ಲಿ ಇರಿಸಿರುವ ಮಳೆ ಮಾಪನ ಅಂಕಿ

ಅಂಶದಂತೆ ಈ ವರ್ಷ ಇದುವರೆಗೆ 28 ಇಂಚು ಮಳೆಯಾಗಿದೆ. ಪ್ರಸಕ್ತ ವರ್ಷ ತಾ.19 ರಂದು ಅತ್ಯಧಿಕವೆಂಬಂತೆ ಒಂದೇ ದಿನ 4 ಇಂಚು ಮಳೆ ಸುರಿದಿದೆ.

ಈ ನಡುವೆ ಮಳೆ, ಗಾಳಿ, ಛಳಿ ಲೆಕ್ಕಕ್ಕಿಲ್ಲ ಎಂಬಂತೆ ಪ್ರವಾಸಿಗರು ನಗರಕ್ಕೆ ದೌಡಾಯಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ನಗರದಲ್ಲಿ ವಾಹನಗಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದಾಡುವದಕ್ಕಿಂತ ನಿಧಾನವಾಗಿ ವಾಹನಗಳು ಸಂಚರಿಸಬೇಕಾದ ಅನಿವಾರ್ಯತೆ ತಲೆದೋರಿದೆ. ವಾಹನಗಳ ದಟ್ಟಣೆ ಮಿತಿ ಮೀರಿದೆ. ಮಳೆಯಲ್ಲಿ ನಿಂತು ವಾಹನ ನಿಯಂತ್ರಿಸುವ ಕಾರ್ಯವೂ ಸಂಖ್ಯಾ ಮಿತಿಯಲ್ಲಿರುವ ಪೊಲೀಸರಿಗೆ, ಗೃಹ ರಕ್ಷಕ ಸಿಬ್ಬಂದಿಗೆ ಕಷ್ಟಸಾಧ್ಯವಾಗುತ್ತಿದೆ.

ಈ ನಡುವೆ ದಿನವೂ ಒಂದಲ್ಲ ಒಂದು ದುರಸ್ತಿ, ಮೇಲ್ದರ್ಜೆಗೇರಿಸುವ ಕೆಲಸ ಎಂಬ ಕಾರಣಕ್ಕಾಗಿ ವಿದ್ಯುತ್ ಇಲಾಖೆ ಹಗಲು ವೇಳೆ ಪೂರ್ಣವಾಗಿ ವಿದ್ಯುತ್ ಸ್ಥಗಿತಗೊಳಿಸುತ್ತಿದೆ. ರಾತ್ರಿ ವೇಳೆ ಬರುವ ಬೆಳಕು ಆಗಿಂದಾಗೆ ಕಣ್ಣಾಮುಚ್ಚಾಲೆಯಾಡುತ್ತ ಮಡಿಕೇರಿಯ ನಾಗರಿಕರಿಗೆ ಭ್ರಮೆ ಹುಟ್ಟಿಸಿ ಮರೆಯಾಗುತ್ತಿದೆ. ಮಳೆಗಾಲದಲ್ಲಿ ನಾಗರಿಕರ ಸ್ಥಿತಿ ಕೇಳುವವರಿಲ್ಲದೆ ಅನಾಥವಾಗುತ್ತಿದೆ.

ಏತನ್ಮಧ್ಯೆ ಮಹದೇವಪೇಟೆ ರಸ್ತೆ ಅಗಲೀಕರಣ ಆಮೆ ನಡಿಗೆಯಲ್ಲಿದ್ದು ಅಲ್ಲಿನ ವರ್ತಕರು, ನಿವಾಸಿಗಳು “ನಮ್ಮನ್ನು ಕೇಳುವವರಿಲ್ಲ ದೇವರೇ ಗತಿ” ಎನ್ನುವ ದಯನೀಯ ಸ್ಥಿತಿ ತಲುಪಿದ್ದಾರೆ. ತಾ.24 (ಇಂದು) ರಂದು ಸಂತೆಯ ದಿನ ಬಡಪಾಯಿ ತರಕಾರಿ ಮತ್ತಿತರ ಸಾಮಗ್ರಿಗಳ ಮಾರಾಟಗಾರರು, ಖರೀದಿಸುವವರ ಪಾಡು ಕೆಸರಿನ ಗದ್ದೆಯಲ್ಲಿ ತೇಲುತ್ತಿರುವಂತೆ ಭಾಸವಾಗಬಹುದು. ಇದರಿಂದಾಗಿ ವ್ಯಾಪಾರದ ಪ್ರಮಾಣವೂ ವಾರದಿಂದ ವಾರಕ್ಕೆ ಕುಸಿಯತ್ತಿದೆ.ಸಂತೆಯ ಸಂಕೀರ್ಣ ಕೆಲಸವೂ ನೆನೆಗುದಿಗೆ ಬಿದ್ದು ಮತ್ತಷ್ಟು ದುಷ್ಪರಿಣಾಮವುಂಟಾಗಿದೆ. ಮಡಿಕೇರಿ ನಗರದ ಆಡಳಿತ ವ್ಯವಸ್ಥೆಯಲ್ಲಿ ಅನಾಯಕತ್ವದತ್ತ ದಾಪುಗಾರಿಸಿರುವದರ ಸಂಕೇತವೇ ಇದು? ಎನ್ನುವ ಪ್ರಶ್ನೆ ಸಹಜವಾಗಿ ನಾಗರಿಕರಲ್ಲಿ ಉದ್ಭವವಾಗಿದೆ.-ವರದಿ: ಜಿ.ರಾ, ಚಿತ್ರ: ಲಕ್ಷ್ಮೀಶ್