ವೀರಾಜಪೇಟೆ, ಜೂ. 22: ಪ್ರತಿಯೊಬ್ಬ ಮಾನವರು ಧರ್ಮದ ಗಂಧವನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದು ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ಫಾ. ಟೆನಿ ಕುರಿಯನ್ ಹೇಳಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ಯೋಗ ದಿನಾಚರಣೆಯ ಅಂಗವಾಗಿ‘ಮಾಸಿಕ ತತ್ತ್ವ ಚಿಂತನ ಗೋಷ್ಠಿ ಕಿರಣ 156 ನೇ ಹೊಂಬೆಳಕು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನಂಬಿಕೆಯೇ ಸಂತೋಷದ ಹಾದಿ. ದೇವರು ನೀಡಿರುವಂತ ಕೊಡುಗೆಯನ್ನು ನಾವುಗಳು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದರು.

ಉಪನ್ಯಾಸಕರಾಗಿ ಗೋಣಿಕೊಪ್ಪಲಿನ ಡಾ. ಕೆ.ಎನ್. ಚಂದ್ರಶೇಖರ್ ಮಾತನಾಡಿ, ಯಾವದೇ ಕೆಲಸ ಮಾಡಬೇಕಾದರೆ ಶ್ರದ್ಧೆ, ಛಲ, ಮತ್ತು ಸಮಯ ಪಾಲನೆ ಮುಖ್ಯ. ಮನುಷ್ಯ ಅರೋಗ್ಯದಿಂದ ಇರಲು ಯೋಗದಿಂದ ಮಾತ್ರ ಸಾಧ್ಯ. ಅದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಜಿಲ್ಲಾ ಯೋಗ ಶಿಕ್ಷಣದ ಪಿ.ಎ. ಲಕ್ಷ್ಮಿನಾರಾಯಣ ಮಾತನಾಡಿದರು. ವಿದ್ಯಾರ್ಥಿ ವಾತ್ಸಲ್ಯ ಸ್ವಾಗತಿಸಿದರೆ, ಶಮ ರಮೇಶ್ ನಿರೂಪಿಸಿ, ಮೇಘನಾ ವಂದಿಸಿದರು.