ಕುಶಾಲನಗರ, ಜೂ 20: ಶರಣ ಸಾಹಿತ್ಯ ಪರಿಷತ್ ಹಾಗೂ ವೀರಶೈವ ಸಮಾಜ ಆಶ್ರಯದಲ್ಲಿ ತಾ. 21 ರಂದು (ಇಂದು) ಕುಶಾಲನಗರಕ್ಕೆ ಆಗಮಿಸಲಿರುವ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಗಳ ಜನ್ಮಶತಮಾನೋತ್ಸವ ಜ್ಯೋತಿಯಾತ್ರೆ ರಥಕ್ಕೆ ಭವ್ಯ ಸ್ವಾಗತ ಕೋರಲಾಗುವದು ಎಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರಿನ ರಾಜೇಂದ್ರ ಮಹಾಸ್ವಾಮಿಗಳು 1986ರಲ್ಲಿ ಶರಣ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸಿದವರು. ನಾಡಿನ ಹೆಸರಾಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಇವರ ಜನ್ಮಶತಮಾನೋತ್ಸವದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಜ್ಯೋತಿಯಾತ್ರೆ ಮಡಿಕೇರಿ ಮೂಲಕ ತಾ. 21 ರಂದು ಕುಶಾಲನಗರಕ್ಕೆ ಪ್ರವೇಶಿಸಲಿದ್ದು, ಬೈಚನಹಳ್ಳಿಯ ಮಾರಿಯಮ್ಮ ದೇವಾಲಯ ಬಳಿ ವಿವಿಧ ಕಲಾತಂಡಗಳೊಂದಿಗೆ ರಥ ವನ್ನು ಬರಮಾಡಿಕೊಳ್ಳ ಲಾಗುವದು. ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ರಾಜೇಂದ್ರ ಮಹಾಸ್ವಾಮಿಗಳ ಜೀವನ ಚರಿತ್ರೆ ಕುರಿತು ಮಾಹಿತಿ ನೀಡಲಿದ್ದಾರೆ. ತೊರೆನೂರಿನ ಮಲ್ಲೇಶ ಸ್ವಾಮೀಜಿ, ಸಿಡಿಗಳಲೆಯ ಮಹಾಂತ ಸ್ವಾಮೀಜಿ, ದಿಂಡಗಾಡಿನ ಅಪ್ಪಾಜಿ ಸ್ವಾಮೀಜಿಗಳು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಸಿ.ಸಿ. ಸದಾಶಿವಪ್ಪ ಮಾತನಾಡಿ, ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಸುಧೀರ್ಘ ಪರಂಪರೆ ಹೊಂದಿರುವ ಸುತ್ತೂರು ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಜಗದ್ಗುರುಗಳಾದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶ್ರೀಮಠಕ್ಕೆ ಬಹುಮುಖ ಆಯಾಮ ವನ್ನು ನೀಡಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದವರು. ಮಠದ ಮೂಲಕ ಶಿಕ್ಷಣ, ಆರೋಗ್ಯ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿ ಅಭಿವೃದ್ಧಿಗೆ ಹಾಗೂ ಧರ್ಮಜಾಗೃತಿಗಾಗಿ ಭದ್ರಬುನಾದಿ ಹಾಕಿಕೊಟ್ಟಂತಹ ಮಹಾನ್ ಚೇತನ ಎಂದರು.

2016ರ ಜನವರಿ 2 ರಂದು ಮೈಸೂರಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮಹಾಸ್ವಾಮಿಗಳ ಜನ್ಮಶತಮಾ ನೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ್ದು ಕಾರ್ಯಕ್ರಮದ ಅಂಗವಾಗಿ ಆರಂಭವಾದ ಜ್ಯೋತಿ ಯಾತ್ರೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಆಯ್ದ ಭಾಗಗಳಲ್ಲಿ 100 ದಿನಗಳ ಕಾಲ ಸುಮಾರು 5000 ಕಿಮೀ ದೂರ ಸಂಚರಿಸಿ ಮೈಸೂರಿಗೆ ಮರಳಲಿದ್ದು ಇದೇ ಆಗಸ್ಟ್ ತಿಂಗಳಲ್ಲಿ ಸುತ್ತೂರು ಕ್ಷೇತ್ರದಲ್ಲಿ ಜನ್ಮಶತ ಮಾನೋತ್ಸವ ಸಮಾರೋಪ ಕಾರ್ಯ ಕ್ರಮ ಸಂಪನ್ನವಾಗಲಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಜ್ಯೋತಿಯಾತ್ರೆ ಸಮಿತಿ ಅಧ್ಯಕ್ಷ ಪಿ. ಮಹದೇವಪ್ಪ, ಸೋಮವಾರಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಮಹದೇವಪ್ಪ ಇದ್ದರು.