ಮಡಿಕೇರಿ, ಜೂ. 22: ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ಚುನಾಯಿತರಾಗಿರುವ ಏಳು ಮಂದಿ ಇಂದು ವಿಧಾನ ಪರಿಷತ್‍ನಲ್ಲಿ ಪ್ರಮಾಣವಚನ ಸ್ವೀಕಾರದೊಂದಿಗೆ ಅಧಿಕಾರ ವಹಿಸಿಕೊಂಡರು. ಏಳು ಸದಸ್ಯರ ಪೈಕಿ ಒಬ್ಬರಾಗಿರುವ ಕೊಡಗಿನ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕೊಡಗಿನ ಕುಲದೇವರಾದ ಶ್ರೀ ಇಗ್ಗುತಪ್ಪ ಹಾಗೂ ಕಾವೇರಮ್ಮ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಪ್ರಮಾಣ ವಚನ ಬೋಧಿಸಿದರು.

ಕೊಡವ ಸಾಂಪ್ರದಾಯಿಕ ಸೀರೆಯೊಂದಿಗೆ ತಲೆಗೆ ವಸ್ತ್ರ ಧರಿಸಿದ್ದ ಏಕೈಕ ಮಹಿಳಾ ಸದಸ್ಯೆಯಾದ ವೀಣಾ ಅವರು ವಿಶೇಷವಾಗಿ ಗಮನ ಸೆಳೆದರು.ಪ್ರಮಾಣ ವಚನ ಸ್ವೀಕಾರ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ಪ್ರಮುಖರಾದ ಬಿ.ಎಸ್. ತಮ್ಮಯ್ಯ, ಚೆಕ್ಕೇರ ವಾಸು ಕುಟ್ಟಪ್ಪ, ಅಬ್ದುಲ್ ರೆಹಮಾನ್, ಕೆ.ಕೆ. ಮಂಜುನಾಥ್‍ಕುಮಾರ್, ನಂದಿನೆರವಂಡ ಮಧು, ಗೋಕುಲನಾಥ್ ನಾಯಕ್, ವೀಣಾ ಪುತ್ರರಾದ ವಿಶಾಲ್, ವಿಕಾಸ್ ಮತ್ತಿತರರು ಪಾಲ್ಗೊಂಡಿದ್ದರು.