ಕುಶಾಲನಗರ, ಜೂ. 25: ಕಾವೇರಿ ನದಿ ಬಚಾವೋ ಆಂದೋಲನದ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಿಂದ ಹೊರಟ ಕಾವೇರಿ ನದಿ ಸ್ವಚ್ಛತಾ ಸಮಿತಿಯ ಪಾದಯಾತ್ರೆ ತಂಡ ಮೈಸೂರು ಜಿಲ್ಲೆಯ ಇಲವಾಲ ತಲುಪಿದೆ.

ಕಾವೇರಿ ನದಿ ಸಂರಕ್ಷಣೆ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವದು, ನದಿ ತಟಗಳ ವಾಸ್ತವಾಂಶ ಅರಿತು ಸರಕಾರಕ್ಕೆ ಮಾಹಿತಿ ಒದಗಿಸುವ ಉದ್ದೇಶ ಹೊತ್ತು ಹೊರಟಿರುವ ಪಾದಯಾತ್ರೆ ತಂಡ ಜಿಲ್ಲೆಯಿಂದ ಕಣಿವೆ ಮೂಲಕ ಕೊಣನೂರು, ರಾಮನಾಥಪುರ ಮಾರ್ಗವಾಗಿ ಕೆ.ಆರ್.ನಗರ ಮೂಲಕ ಬಿಳಿಕೆರೆ ಮೈಸೂರು ಹೆದ್ದಾರಿಯಲ್ಲಿ ಸಾಗಿ ಇಲವಾಲದಲ್ಲಿ ವಾಸ್ತವ್ಯ ಹೂಡಿದೆ. ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದ 6 ಸಾಧುಸಂತರು ಮತ್ತು 5 ಮಂದಿ ಕಾರ್ಯಕರ್ತರು ಸೇರಿದಂತೆ 11 ಮಂದಿ ಒಟ್ಟು 1200 ಕಿಮೀ ದೂರದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಶ್ರೀರಂಗಪಟ್ಟಣದತ್ತ ಸಾಗುವ ಪಾದಯಾತ್ರೆ ತಂಡ ನಂತರ ಟಿ. ನರಸೀಪುರ ಮಾರ್ಗವಾಗಿ ಮೇಕೆದಾಟು ನಂತರ ಜುಲೈ 3 ರಂದು ಹೊಗೇನಕಲ್ ಮೂಲಕ ತಮಿಳುನಾಡಿಗೆ ಸಾಗಲಿದೆ. ಆಗಸ್ಟ್ 14 ರಂದು ಕಾವೇರಿ ನದಿ ಬಂಗಾಳಕೊಲ್ಲಿ ಸಮುದ್ರ ಸಂಗಮವಾಗುವ ಪೂಂಪ್‍ಹಾರ್ ಬಳಿ ಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕÀ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.