ವೀರಾಜಪೇಟೆ, ಜೂ. 27 ಸಮಾಜದ ಪ್ರತಿಯೊಬ್ಬರು ಮದ್ಯ ಸೇವನೆಯನ್ನು ತ್ಯಜಿಸಿ ಕಡ್ಡಾಯ ಶಿಕ್ಷಣಕ್ಕೆ ಆದ್ಯತೆÉ ನೀಡಿದರೆ ಸಮಾಜದಲ್ಲಿ ಬಹುಮುಖದ ಪ್ರಗತಿಯನ್ನು ಕಾಣಬಹುದು ಎಂದು ನಾರಾಯಣ ಧರ್ಮಪಾಲನಾ ಸಂಘದ ರಾಜ್ಯ ಒಕ್ಕೂಟ ಸಮಿತಿಯ ಕೌನ್ಸಿಲ್ ಸದಸ್ಯ ವಾಸುದೇವ್ ಹೇಳಿದರು.
ಎಸ್‍ಎನ್‍ಡಿಪಿ ವೀರಾಜಪೇಟೆ ಶಾಖೆಯ ವತಿಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು, ಮಾತನಾಡಿದರು. ಸಮಾಜದ ಪ್ರಗತಿಯ ಸಂಕೇತ, ಬಾಲ್ಯದಿಂದಲೇ ಮಕ್ಕಳಿಗೆ ಪೋಷಕರು ವಿದ್ಯೆಗೆ ಮಹತ್ವ ನೀಡಬೇಕು. ಮಕ್ಕಳಿಗೆ ದುಶ್ಚಟಗಳಿಂದ ದೂರವಿರುವ ಶಿಕ್ಷಣವನ್ನು ಪ್ರತ್ಯೇಕವಾಗಿ ವಿದ್ಯಾ ಸಂಸ್ಥೆಗಳು ನೀಡುವಂತಾಗ ಬೇಕು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಎಸ್‍ಎನ್‍ಡಿಪಿ ಮಹಿಳಾ ಘಟಕದ ರಾಜ್ಯ ಸಮಿತಿ ಅಧ್ಯಕ್ಷೆ ವಾಣಿ ಮಾತನಾಡಿ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಿದರೆ ಆರ್ಥಿಕವಾಗಿ ಸುಧಾರಿಸಬಹುದು. ಮಹಿಳೆಯರು ದಿನದಿಂದ ದಿನಕ್ಕೆ ರೂಪುಗೊಳ್ಳುತ್ತಿರುವ ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕ ಸಬಲೀಕರಣ ಗೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಹೇಳಿದರು. ಸಮಾರಂಭದಲ್ಲಿ ತಾಲೂಕು ಪಂಚಾಯಿತಿಗೆ ಆಯ್ಕೆ ಯಾದ ಸಂಘದ ಬಿ.ಎಂ. ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿ.ಎ. ನಾರಾಯಣ ಮಾತನಾಡಿ, ನಾರಾಯಣ ಗುರು ಅವರ ತತ್ವ ಆದರ್ಶಗಳು, ಮಾರ್ಗದರ್ಶನವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾರಾಯಣ ಗುರು ಅವರು, ದೇಶದ ಒಳಿತಿಗಾಗಿ ಸಾರಿದ ಸಂದೇಶಗಳು ಅವಿಸ್ಮರಣೀಯ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಶಶಿಧರ್, ಉದ್ಯಮಿ ಬಿ.ಆರ್. ಬೋಜಪ್ಪ, ಟಿ.ಎನ್. ಮಿಥುನ್, ಅಚ್ಚುಕುಟ್ಟಿ ಉಪಸ್ಥಿತರಿದ್ದರು. ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 6 ಮಂದಿ ವಿದ್ಯಾರ್ಥಿ ಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.