ಮಡಿಕೇರಿ, ಜೂ. 23: ಖಾಸಗಿ ಕಟ್ಟಡ ಕಾಮಗಾರಿ ಸಂದರ್ಭ ಸಾರ್ವಜನಿಕ ಆಸ್ತಿಗೆ ಹಾನಿಪಡಿಸಿ ನಷ್ಟವುಂಟು ಮಾಡಿದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಕಟ್ಟಡ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ಪರವಾನಿಗೆಯನ್ನು ತಡೆ ಹಿಡಿದ ಘಟನೆ ನಡೆದಿದೆ.
ನಗರದ ಚೌಕ್ ಬಳಿ ಸಿಂಧೂರ್ ಟೆಕ್ಸ್ಟೈಲ್ಸ್ ಎದುರು ಖಾಸಗಿ ಮಾಲೀಕತ್ವದಲ್ಲಿರುವ ಜಾಗದಲ್ಲಿ ನಿಯಮ ಬದ್ಧವಾಗಿ ಕಟ್ಟಡ ನಿರ್ಮಾಣ ಮಾಡಲು ನಗರಸಭೆಯಿಂದ ಪರವಾನಿಗೆ ನೀಡಲಾಗಿತ್ತು. ಕಟ್ಟಡ ನಿರ್ಮಾಣ ಮಾಡಲು ಜಾಗ ಸಮತಟ್ಟು ಮಾಡುವ ಸಂದರ್ಭ ಅಕ್ಕಪಕ್ಕ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಹೆಚ್ಚುವರಿ ಜಾಗವನ್ನು ಅಗೆದು ಹಾಕಲಾಗಿದೆ. ಒಳಚರಂಡಿ ವ್ಯವಸ್ಥೆಗೂ ಹಾನಿಯಾಗಿದೆ. ಜೂನಿಯರ್ ಕಾಲೇಜು ರಸ್ತೆ ಹಾಗೂ ದಾಸವಾಳ ರಸ್ತೆ ವ್ಯಾಪ್ತಿಯ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಪೈಪನ್ನು ಒಡೆದು ಸುಮಾರು ಒಂದು ವಾರದಿಂದ ಕುಡಿಯುವ ನೀರಿನ ಅಭಾವವುಂಟಾಗಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಲೂ ಬರೆ ಕುಸಿತವುಂಟಾಗಿ ಮುಖ್ಯರಸ್ತೆಗೆ ಹಾನಿಯಾಗಿದೆ. ವಾಹನ ನಿಲುಗಡೆಗೂ ತಡೆಯಾಗಿದೆ. ಇಂದು ಕಾಮಗಾರಿ ನಿರ್ವಹಿಸುತ್ತಿದ್ದ ಕಾರ್ಮಿಕರು ಚೌಕ್ ಮುಖ್ಯ ರಸ್ತೆಯಿಂದ ದಾಸವಾಳ ರಸ್ತೆಯತ್ತ ತೆರಳುವ ಕಾಲು ದಾರಿಯನ್ನು ಒಡೆದು ಹಾಕಿ ಹಾನಿಪಡಿಸಿದ್ದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ನಗರಸಭಾ ಸದಸ್ಯ ಚುಮ್ಮಿದೇವಯ್ಯ ಹಾಗೂ ಇತರರು ಸಾರ್ವಜನಿಕ ಆಸ್ತಿಗೆ ಹಾನಿಪಡಿಸಿದುದನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭಾ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಚುಮ್ಮಿದೇವಯ್ಯ ಅವರು ಸ್ಥಳಕ್ಕಾಗಮಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರಾ ಹಾಗೂ ಆಯುಕ್ತೆ ಬಿ.ಬಿ. ಪುಷ್ಪಾವತಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಚುಮ್ಮಿ ದೇವಯ್ಯ ಅವರು ಆಯುಕ್ತರಲ್ಲಿ ಈ ರೀತಿಯಲ್ಲಿ ಕಾಮಗಾರಿ ನಿರ್ವಹಿಸಲು ಅನುಮತಿ ಏಕೆ ನೀಡುತ್ತೀರಿ. ಸಾರ್ವಜನಿಕ ಆಸ್ತಿಯನ್ನು ನಷ್ಟ ಪಡಿಸಿದ್ದಾರೆ. ಮಾಲೀಕರ ಪರವಾನಿಗೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ಆಯುಕ್ತರಿಗೆ ಕಟ್ಟಡ ಕಾಮಗಾರಿ ಸಂದರ್ಭ ಸಾರ್ವಜನಿಕ ಆಸ್ತಿಯನ್ನು ಹಾನಿಪಡಿಸಿ ನಷ್ಟವಾಗಿರುವದು ಕಂಡು ಬಂದಿದೆ. ಕಟ್ಟಡ ಮಾಲೀಕರ ಪರವಾನಿಗೆಯನ್ನು ತಡೆಹಿಡಿಯುವದಾಗಿ ಹೇಳಿದರು. ಸಾರ್ವಜನಿಕ ಆಸ್ತಿಯನ್ನು ಈ ರೀತಿ ಹಾನಿಪಡಿಸಿ ನಷ್ಟವುಂಟು ಮಾಡುವದರೊಂದಿಗೆ ಸಾರ್ವಜನಿಕರಿಗೂ ಸಮಸ್ಯೆಯನ್ನುಂಟು ಮಾಡುವದು ಸರಿಯೇ ಎಂದು ಅಲ್ಲಿ ಸೇರಿದ್ದ ಮಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಕಂಡು ಬಂದಿತು.
- ಚಂದ್ರ ಉಡೋತ್