(ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್)

ಭಾಗಮಂಡಲ, ಜೂ. 24: ಮಾರಕ ಕಾಯಿಲೆ ಡೆಂಗಿ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಗಡಿಭಾಗ ಕರಿಕೆಯಲ್ಲಿ ನೂರಕ್ಕೂ ಅಧಿಕ ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈಗಾಗಲೇ ಮೂವರು ಈ ರೋಗಕ್ಕೆ ಬಲಿಯಾಗಿದ್ದು, ಇನ್ನೀಗ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೂ ನಾಲ್ವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವದು ತಿಳಿದುಬಂದಿದೆ.

ಕೊಡಗು ಜಿಲ್ಲೆಯಲ್ಲಿ ವಾಸವಿದ್ದರೂ ಸೌಲಭ್ಯಗಳ ಕೊರತೆಯಿಂದಾಗಿ ನೆರೆಯ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕು ಪೀಡಿತರು ಚಿಕಿತ್ಸೆ ಪಡೆಯುತ್ತಿರುವದು ಬೆಳಕಿಗೆ ಬಂದಿದೆ.

ಕೇರಳದ ಹವಾಗುಣಕ್ಕೆ ಹೊಂದಿಕೊಂಡಂತಿರುವ ರಬ್ಬರ್ ಕೃಷಿಯೇ ಹೇರಳವಾಗಿರುವ ಗಡಿಗ್ರಾಮ ಕರಿಕೆಯಲ್ಲಿ ಡೆಂಗಿ ಕಾಯಿಲೆ ವ್ಯಾಪಕವಾಗಿ ಹರಡಿದೆ. ಪ್ರತಿನಿತ್ಯ ನೂರಾರು ಮಂದಿ ನೆರೆಯ ಕೇರಳದ ಪಾಣತ್ತೂರು, ಕಾಞಂಗಾಡ್, ಸುಳ್ಯ, ಮಂಗಳೂರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವದು ‘ಶಕ್ತಿ'ಗೆ ಪ್ರತ್ಯಕ್ಷವಾಗಿ ಗೋಚರಿಸಿದೆ. ಈಗಾಗಲೇ ಈ ಕಾಯಿಲೆಗೆ ಮೂವರು ಬಲಿಯಾಗಿ ದ್ದಾರೆ. ಓರ್ವ ಚಿಂತಾಜನಕ ಸ್ಥಿತಿಯಲ್ಲಿದ್ದು, ನಾಲ್ವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 100ಕ್ಕೂ ಅಧಿಕ ಮಂದಿಯಲ್ಲಿ ಡೆಂಗಿ ಸೋಂಕು ಇರುವ ಬಗ್ಗೆ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಭೀರ ಪರಿಸ್ಥಿತಿ

ಕರಿಕೆ ಗ್ರಾಮದ ಎಳ್ಳುಕೊಚ್ಚಿ ಗ್ರಾಮದಲ್ಲಿ ಈ ಕಾಯಿಲೆ ವ್ಯಾಪಕವಾಗಿ ಹರಡಿದೆ. ಅಲ್ಲಿನ ನಿವಾಸಿ ಪ್ರಶಾಂತ್ ಎಂಬವರು ಚಿಂತಾಜನಕ ಸ್ಥಿತಿಯಲ್ಲಿದ್ದು, ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಅದೇ ಗ್ರಾಮದ ದೇವರಾಜ್, ಫಾತಿಮಾ, ಶೈಲಜ ಹಾಗೂ ಯತಿನ್ ಎಂಬವರುಗಳ

ಸ್ಥಿತಿ ಕೂಡ ಗಂಭೀರವಾಗಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ದಾಖಲು

ಕರಿಕೆ ಗ್ರಾಮ ಗಡಿಯಲ್ಲಿರು ವದರಿಂದ ಅಲ್ಲಿನ ನಿವಾಸಿಗಳಿಗೆ ಆರೋಗ್ಯ ಸೇವೆಯ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಕಾಯಿಲೆಗಳು ಬಂದಾಗ ಕೂಡಲೇ ಚಿಕಿತ್ಸೆ ಹೊಂದಲು ಯಾವದೇ ಆಸ್ಪತೆ ್ರಗಳಿಲ್ಲ. ಭಾಗಮಂಡಲಕ್ಕೆ ಬಂದರೆ ಅಲ್ಲಿ ವೈದ್ಯರುಗಳಿಲ್ಲ. ಇನ್ನೂ ಮಡಿಕೇರಿಗೆ ಬರಬೇಕಾದರೆ 50ಕ್ಕೂ ಅಧಿಕ ಕಿ.ಮೀ. ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿನವರು ಬಹುತೇಕವಾಗಿ ನೆರೆಯ ಕೇರಳ ಹಾಗೂ ಸುಳ್ಯ ಆಸ್ಪತ್ರೆಗಳನ್ನು ಅವಲಂಬಿಸುವ ದುಸ್ಥಿತಿ ಬಂದೊದಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ಸೋಂಕು ಪೀಡಿತರು ನೆರೆಯ ಜಿಲ್ಲೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಭಾಗಮಂಡಲ ಅಥವಾ ಮಡಿಕೇರಿಗೆ ಯಾರೂ ಕೂಡ ಆಗಮಿಸಿಲ್ಲ. ‘ಹಿತ್ತಲ ಗಿಡ ಮದ್ದಲ್ಲ' ಎಂಬದಕ್ಕೆ ಇದೊಂದು ನಿದರ್ಶನವಾಗಿದೆ. ಮಂಗಳೂರಿನ ಫಾದರ್ ಮುಲ್ಲ ಆಸ್ಪತ್ರೆಯಲ್ಲಿ 22 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಬೇರೆ ಆಸ್ಪತ್ರೆಗಳಲ್ಲಿ 80ಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆಂದು ಹೇಳಲಾಗು ತ್ತಿದೆ. ಕೇರಳದ ಪಾಣತ್ತೂರಿ ನಲ್ಲಿ 8 ಮಂದಿ, ಕಾಞಂಗಾಡಿನಲ್ಲಿ 11 ಮಂದಿ, ಸುಳ್ಯದಲ್ಲಿ 8 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯದ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರೋಗಿಗಳ ಸಾಲು ಎಲ್ಲೆ ಮೀರಿರುತ್ತಿದ್ದುದು ಸ್ಥಳಕ್ಕೆ ತೆರಳಿದಾಗ ಗೋಚರಿಸಿತು. ಇದಲ್ಲದೆ ಈ ಭಾಗದಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರಿದ್ದು, ಹಣದ ತೊಂದರೆಯಿಂದ ಕೆಲವರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಇರುವ ಬಗ್ಗೆ ತಿಳಿದು ಬಂದಿದೆ.

ಜಿಲ್ಲಾಡಳಿತ ನಿರ್ಲಕ್ಷ್ಯ

ಡೆಂಗಿ ಸೋಂಕು ಮೇ ತಿಂಗಳಲ್ಲಿ ಮೊದಲು ಸುಳ್ಯದಲ್ಲಿ ಪತ್ತೆಯಾಗಿತ್ತು. ತದನಂತರ ಇದೀಗ ಕರಿಕೆಯಲ್ಲಿ ಹರಡಿದೆ. ಸುಳ್ಯದಲ್ಲಿ ಪತ್ತೆಯಾದ ಕೂಡಲೇ ಜಿಲ್ಲೆಯಲ್ಲಿ ಎಚ್ಚರ ವಹಿಸಿದ್ದರೆ ಡೆಂಗಿ ಭೀತಿ ಇಷ್ಟೊಂದು ತಾರಕಕ್ಕೇರುತ್ತಿರಲಿಲ್ಲ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇದೀಗ ಸಾವು - ನೋವು ಸಂಭವಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಲಿಜ್ವರ ಹಾಗೂ ಡೆಂಗಿಗೆ ಇಬ್ಬರು ಬಲಿಯಾಗಿ ದ್ದರು. ಇದೀಗ ಈ ವರ್ಷ ಒಟ್ಟೊಟ್ಟಿಗೆ ಮೂವರು ಬಲಿಯಾಗಿರು ವದು ದುರಂತವಾಗಿದೆ. ಸುಳ್ಯದಲ್ಲಿ ಈಗಲೂ 48 ಮಂದಿಗೆ ಸೋಂಕು ಇದ್ದು, ಈ ಪೈಕಿ ಮೂವತ್ತು ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಚಿಪ್ಪು ತೆಗೆಯಿರಿ

ಕರಿಕೆ ವ್ಯಾಪ್ತಿಯಲ್ಲಿ ರಬ್ಬರ್ ಮರಗಳು ಅಧಿಕವಿದ್ದು, ಮರಗಳಲ್ಲಿ ರಬ್ಬರ್ ಹಾಲು ಸಂಗ್ರಹಿಸಲು ತೆಂಗಿನ ಚಿಪ್ಪುಗಳಲ್ಲಿ ನೀರು ಶೇಖರಣೆಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಕಾಯಿಲೆ ಹರಡುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಇದೀಗ ರಬ್ಬರ್ ಕೆಲಸ ಇಲ್ಲವಾದ್ದರಿಂದ ಚಿಪ್ಪುಗಳನ್ನು ತೆರವುಗೊಳಿಸಬೇಕು, ಹಾಗಾದಲ್ಲಿ ಮಾತ್ರ ನಿಯಂತ್ರಣ ಸಾಧ್ಯವೆಂದು ಅಭಿಪ್ರಾಯಿಸಿದ್ದಾರೆ.

ಶಾಲೆಗೆ ರಜೆ ನೀಡಿ

ಈ ವ್ಯಾಪ್ತಿಯಲ್ಲಿ ಚೆತ್ತುಕಾಯ ಆಶ್ರಮಶಾಲೆ, ಕಾಲೋನಿ ಶಾಲೆ ಹಾಗೂ ಎಳ್ಳುಕೊಚ್ಚಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 700ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರೌಢಶಾಲೆಯ ಮಕ್ಕಳಿಗೆ ಡೆಂಗಿ ಸೋಂಕು ತಗಲಿರುವ ಶಂಕೆಯಿದೆ. ಕಾಯಿಲೆ ಇಷ್ಟೊಂದು ವ್ಯಾಪಕವಾಗಿ ಹರಡಿ ಸಾವುಗಳು ಸಂಭವಿಸಿದ್ದರೂ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿಲ್ಲ. ಸುರಕ್ಷತೆಯ ದೃಷ್ಟಿಯಿಂದ ರಜೆ ಘೋಷಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸೌಲಭ್ಯ ಒದಗಿಸಿ

ಕರಿಕೆ ಗ್ರಾಮ ಪಂಚಾಯಿತಿ ಕರ್ನಾಟಕ - ಕೇರಳ ಗಡಿ ಗ್ರಾಮವಾಗಿದ್ದು, ಜಿಲ್ಲಾ ಕೇಂದ್ರದಿಂದ 70 ಕಿ.ಮೀ. ದೂರವಿರುತ್ತದೆ. ಕನಿಷ್ಟ ಆರೋಗ್ಯ ಸೌಲಭ್ಯ ಇರುವದಿಲ್ಲ. ಜನಸಂಖ್ಯೆಯ ಶೇ. 75ರಷ್ಟು ಜನರು ಹರಿಜನ- ಗಿರಿಜನ ಮತ್ತು ಹಿಂದುಳಿದ ವರ್ಗದವರಾಗಿರುತ್ತಾರೆ. ಭಾಗಮಂಡಲವು 29 ಕಿ.ಮೀ. ದೂರವಿದ್ದು, 12 ಕಿ.ಮೀ. ಕಾಡಿನ ಮೂಲಕ ಪ್ರಯಾಣ ಮಾಡಬೇಕಾಗಿರುತ್ತದೆ. ಆದರೆ ಅಲ್ಲಿಯೂ ಕೂಡ ಆರೋಗ್ಯ ಸೇವೆಯಲ್ಲಿ ಸೂಕ್ತ ಸ್ಪಂದನೆ ದೊರಕದೆ ಅನಾನುಕೂಲವಾಗಿರುತ್ತದೆ. ಆರೋಗ್ಯ ಸೇವೆಗಾಗಿ ಗಡಿ ರಾಜ್ಯವಾದ ಕೇರಳವನ್ನು ಅವಲಂಬಿಸುವಂತಾಗಿದೆ. ಗ್ರಾಮ ಸಭೆಗಳಲ್ಲಿ ಕರ್ನಾಟಕ ರಾಜ್ಯವು ಗ್ರಾಮವನ್ನು ನಿರ್ಲಕ್ಷಿಸಲ್ಪಟ್ಟಿದ್ದು, ಗ್ರಾಮದ ಜನರು ಸರ್ಕಾರದ ಸೌಲಭ್ಯ ಪಡೆಯಲು ಕಷ್ಟ ಸಾಧ್ಯವಾಗಿದೆ ಎಂದು ಜನರು ನೋವು ತೋಡಿಕೊಳ್ಳುತ್ತಿದ್ದಾರೆ. ಜನರಿಗೆ ಸೂಕ್ತ ವೈದ್ಯಕೀಯ ಸೇವೆಯನ್ನು ಪಡೆಯುವಂತೆ ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಹರ ಸಾಹಸ ಪಟ್ಟರೂ ಯಾವದೇ ಪ್ರಯೋಜನವಾಗದೆ ಹತಾಶರಾಗಿರು ತ್ತಾರೆ. ಹೆಚ್ಚಾಗಿ ಬಡವರ್ಗದ ಜನರೇ ವಾಸಿಸುತ್ತಿರುವ ಕರಿಕೆ ಗ್ರಾಮಕ್ಕೆ ಇದೀಗ (ಮೇ-2016) ಡೆಂಗಿ ಕಾಯಿಲೆ ವ್ಯಾಪಿಸುತ್ತಿದ್ದು, ಸೂಕ್ತ ತಿಳುವಳಿಕೆ ನೀಡುವ ವೇಳೆಗಾಗಲೇ ಡೆಂಗಿ ರೋಗವು 50ಕ್ಕೂ ಹೆಚ್ಚು ಜನರಿಗೆ ತಗುಲಿದ್ದು, 4 ಮಂದಿ ಇದೀಗ ಸಾವು - ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಸೌಲಭ್ಯ ಒದಗಿಸುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆದಿರುವದಾಗಿ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್ ಹೇಳುತ್ತಾರೆ. ಕರಿಕೆಯಲ್ಲಿ ಆಸ್ಪತ್ರೆ ತೆರೆಯಲು ಹಿಂದಿನ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿರುವದಾಗಿ ತಿಳಿಸಿದರು.

ಇಲಾಖೆ ನಿರ್ಲಕ್ಷ್ಯ

ಆರೋಗ್ಯ ಸುಧಾರಣೆ ಹಾಗೂ ಪರಿಹಾರೋಪಾಯಕ್ಕಾಗಿ ಇರುವ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ದೂರಿಕೊಂಡಿದ್ದಾರೆ. ಮೊನ್ನೆ ದಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತಾದರೂ, ರಸ್ತೆ ಬದಿ ನಡೆಸುವ ಇಂತಹ ಕಾರ್ಯಕ್ರಮ ಗಳಿಂದ ಏನೂ ಪ್ರಯೋಜನವಿಲ್ಲ. ಮನೆ, ಕಾಲೋನಿಗಳಿಗೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಜಿಲ್ಲಾ ಆರೋಗ್ಯಾಧಿಕಾರಿಗಳು ಬೇಜವಾಬ್ದಾರಿ ತನದಿಂದ ವರ್ತಿಸಿದ್ದಾರೆ. ‘ನಮಗೆ ಜನಪ್ರತಿನಿಧಿ ಗಳು ಬೈತಾರೆ, ಅದಕ್ಕೆ ನಾವು ಕೂಡ ನೆಗೆಟಿವ್ ಥಿಂಕ್ ಮಾಡಬೇಕಾ ಗುತ್ತದೆ' ಎಂದು ಆರೋಗ್ಯಾಧಿಕಾರಿ ಗಳು ಹೇಳಿರುವದು ಸರಿಯಲ್ಲ ವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಭಾಗದಲ್ಲಿ ಇನ್ನಷ್ಟು ಸಾವು - ನೋವುಗಳು ಸಂಭವಿಸುವ ಮುನ್ನ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಆಸ್ಪತ್ರೆಗೆ ಆಗ್ರಹ

ಕರಿಕೆಯಲ್ಲಿ ಆಯುರ್ವೇದ ಆಸ್ಪತ್ರೆಯೊಂದಿದೆ. ಸುಮಾರು ಒಂದು ಎಕರೆ ಪ್ರದೇಶ ಹೊಂದಿರುವ ಆಸ್ಪತ್ರೆಯಲ್ಲಿ ಯಾವದೇ ವೈದ್ಯರಿಲ್ಲ. ಇದೇ ಆಸ್ಪತ್ರೆಯನ್ನು ಆರೋಗ್ಯ ಕೇಂದ್ರವಾಗಿ ಪರಿವರ್ತಿಸಿ, ವೈದ್ಯರನ್ನು ನೇಮಿಸಿದರೆ ಬಹತೇಕ ಸಮಸ್ಯೆ ಇತ್ಯರ್ಥಗೊಳ್ಳಲಿದೆ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.