ಮಡಿಕೇರಿ, ಜೂ. 16: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ನೀಡುವಂತೆ ಒತ್ತಾಯಿಸಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ.ಮಣಿ ಅವರ ನೇತೃತ್ವದಲ್ಲಿ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಅಧ್ಯಕ್ಷರು ಹಾಗೂ ಸದಸ್ಯರು ಸಿದ್ದಾಪುರ ಗ್ರಾ.ಪಂ. ಕಸ ವಿಲೇವಾರಿ ಸಮಸ್ಯೆಯನ್ನು ಕಳೆದ ಅನೇಕ ವರ್ಷಗಳಿಂದ ಎದುರಿಸುತ್ತಾ ಬಂದಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಿದ್ದಾಪುರ ಗ್ರಾಮ ಪಟ್ಟಣ ಪ್ರದೇಶವಾಗಿ ಬೆಳವಣಿಗೆ ಕಾಣುತ್ತಿದ್ದು, ಸುಮಾರು 12 ಸಾವಿರ ಜನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನ ಸುಮಾರು 2 ಟನ್‍ಗಳÀಷ್ಟು ಕಸ ಉತ್ಪಾದನೆಯಾಗುತ್ತಿದೆ. ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಇರುವದರಿಂದ ಅಶುಚಿತ್ವದ ವಾತಾವರಣ ಎದುರಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೀಗ ಮಳೆಗಾಲವೂ ಆರಂಭಗೊಂಡಿರುವದರಿಂದ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಕ್ಲಿಷ್ಟಕರವಾಗಿದೆ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಹಲವಾರು ಹೋರಾಟಗಳನ್ನು ಮಾಡಿದ್ದರೂ ಇಲ್ಲಿಯವರೆಗೆ ಸಮಸ್ಯೆಗೆ ಪರಿಹಾರ ದೊರೆತಿಲ್ಲವೆಂದು ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಅಸಹಾಯಕತೆ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯ ಸರ್ವೆ ಸಂಖ್ಯೆ 124 ರ ಸರ್ಕಾರಿ ಜಾಗ ಜನ ವಸತಿ ಪ್ರದೇಶದಿಂದ ದೂರದಲ್ಲಿದ್ದು, ಕಸ ವಿಲೇವಾರಿಗೆ ಸೂಕ್ತ ಜಾಗವೆಂದು ಗುರುತಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಹಿಂದಿನ ಜಿಲ್ಲಾಧಿಕಾರಿಗಳಿಗೆ, ಶಾಸಕರುಗಳಿಗೆ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಆದÀರೆ ಯಾವದೇ ರೀತಿಯ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು.
ದಿನ ಕಳೆದಂತೆ ಕಸದ ಸಮಸ್ಯೆ ಉಲ್ಬಣಿಸುತ್ತಿದ್ದು, ತಕ್ಷಣ ಜಿಲ್ಲಾಡಳಿತ ಸಮಸ್ಯೆಗೆ ಸ್ಪಂದಿಸಿ ಗ್ರಾ.ಪಂ. ಈಗಾಗಲೇ ಗುರುತಿಸಿರುವ ಜಾಗದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವ ಮೂಲಕ ಅಧಿಕೃತ ಆದೇಶ ಹೊರಡಿಸಬೇಕೆಂದು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಿದ್ದಾಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಪಾಧ್ಯಕ್ಷೆ ಎಂ.ಎ. ರಾಜೇಶ್ವರಿ, ಸದಸ್ಯರುಗಳಾದ ಅಬ್ದುಲ್ ಸುಕುರು, ಮಂಜುನಾಥ್, ಹುಸೇನ್, ರೆಜಿತ್ ಕುಮಾರ್, ಕೃಷ್ಣ, ಪ್ರೇಮ, ಪೂವಮ್ಮ, ಲಕ್ಷ್ಮೀ, ಪ್ರತಿಮ, ಶೈಲ, ಶೀಲಾ, ಕೆ.ಜಿ. ಕರುಪಯ್ಯ, ದೇವಜಾನು ಇವರುಗಳು ಹಾಜರಿದ್ದರು.