ಸೋಮವಾರಪೇಟೆ, ಮಾ. 29: ಅರಣ್ಯ ಬರಿದಾಗಿರುವ ಹಿನ್ನೆಲೆ ಆಹಾರ ಹಾಗೂ ನೀರಿಗಾಗಿ ಕಾಡಾನೆಗಳ ಹಿಂಡು ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಿರಿಕರ, ಚಿಕ್ಕಾರ, ಕೂಗೂರು, ದೊಡ್ಡಮಳ್ತೆ, ಮಲ್ಲೇಶ್ವರ, ಎಳನೀರು ಗುಂಡಿ ಗ್ರಾಮಗಳಲ್ಲಿ ಅಡ್ಡಾಡುತ್ತಿದ್ದು, ತೋಟದಲ್ಲಿರುವ ಕೃಷಿ ಫಸಲು ನಷ್ಟಗೊಳ್ಳುತ್ತಿದೆ. ಜನವಸತಿ ಪ್ರದೇಶದಲ್ಲೇ ಕಾಡಾನೆಗಳು ಬೀಡುಬಿಟ್ಟಿರುವದರಿಂದ ಸಾರ್ವಜನಿಕರು ಭಯದಿಂದಲೇ ದಿನದೂಡುವಂತಾಗಿದೆ.

ಕಾಡಾನೆಗಳ ನಿರಂತರ ಹಾವಳಿಯಿಂದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಕೃಷಿಕರು ಫಸಲು ನಷ್ಟ ಅನುಭವಿಸುತ್ತಿದ್ದಾರೆ. ಹಿರಿಕರ ಗ್ರಾಮದ ಹೆಚ್.ಡಿ. ಸುಬ್ರಮಣಿ, ಚಿಕ್ಕಾರ ಪ್ರಸಾದ್ ಸೇರಿದಂತೆ ಇತರರ ತೋಟಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳು ಕಾಫಿ, ಬಾಳೆ ಗಿಡಗಳಿಗೆ ಹಾನಿಪಡಿಸಿವೆ. ನಿಡ್ತ ಮತ್ತು ಮಾಲಂಬಿ ಮೀಸಲು ಅರಣ್ಯಗಳಿಂದ ಆಹಾರ ಅರಸುತ್ತ ಗ್ರಾಮಗಳಿಗೆ ಲಗ್ಗೆ ಹಾಕುವ ಕಾಡಾನೆಗಳ ಹಿಂಡು, ಬಾಳೆತೋಟಗಳಿಗೆ ನುಗ್ಗಿ ಧ್ವಂಸಗೊಳಿಸುತ್ತಿವೆ. ಬೆಳಗ್ಗಿನ ಸಮಯದಲ್ಲಿ ಗ್ರಾಮದ ರಸ್ತೆಯಲ್ಲೆಲ್ಲಾ ಸಾಗುತ್ತಿರುವದರಿಂದ, ಗ್ರಾಮವಾಸಿಗಳು ಭಯದಲ್ಲೇ ಬದುಕುವಂತಾಗಿದೆ. ಬಹುತೇಕ ಕಾಫಿ ಬೆಳೆಗಾರರು ಕಾಫಿ ತೋಟದೊಳಗೆ ಬಾಳೆ ಕೃಷಿ ಮಾಡಿರುವದರಿಂದ, ಕಾಡಾನೆಗಳ ಕಾಲ್ತುಳಿತಕ್ಕೆ ಸಿಕ್ಕಿದ ಕಾಫಿ ಗಿಡಗಳು ನಾಶವಾಗುತ್ತಿವೆ. ಹಲಸಿನ ಕಾಯಿಗಾಗಿ ಇಡಿ ಕಾಫಿ ತೋಟವನ್ನೇ ಗಜಪಡೆ ಜಾಲಾಡುತ್ತಿದ್ದು, ತೋಟಗಳಲ್ಲಿ ಕೆಲಸ ನಿರ್ವಹಿಸಲು ಕಾರ್ಮಿಕ ವರ್ಗ ಭಯಪಡುವಂತಾಗಿದೆ.

ಕೃಷಿಕರು ಬೋರ್‍ವೆಲ್ ಹಾಗೂ ಕೃಷಿ ಹೊಂಡಗಳಿಂದ ರಾತ್ರಿ ಸಮಯದಲ್ಲಿ ಸ್ಪ್ರಿಂಕ್ಲರ್ ಮಾಡಬೇಕಾದ ಅನಿವಾರ್ಯತೆಯಿರುವದರಿಂದ ರಾತ್ರಿ ಹೊತ್ತಿನಲ್ಲಿ ಕೃಷಿಕರು ಕಾಫಿ ತೋಟದಲ್ಲೇ ಕೆಲಸ ನಿರ್ವಹಿಸಬೇಕಾಗಿರುವದರಿಂದ ಕಾಡಾನೆಗಳ ಕಾಟದಿಂದ ಆತಂಕಗೊಂಡಿದ್ದಾರೆ.

ಮೀಸಲು ಅರಣ್ಯದ ಸುತ್ತ ಆನೆಕಂದಕ ಅಥವಾ ಸೋಲಾರ್ ತಂತಿ ಬೇಲಿ ಅಳವಡಿಸುವಂತೆ ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಇದುವರಗೆ ಸಮಸ್ಯೆ ಬಗೆಹರಿದಿಲ್ಲ. ಇನ್ನಾದರೂ ಸರ್ಕಾರ ವಿಶೇಷ ಅನುದಾನ ಕಲ್ಪಿಸಿ ವೈಜ್ಞಾನಿಕವಾಗಿ ಆನೆ ಕಂದಕ ನಿರ್ಮಿಸಿ, ಕೃಷಿಕರನ್ನು ರಕ್ಷಿಸಬೇಕು ಎಂದು ಹಿರಿಕರ ಗ್ರಾಮದ ಕೃಷಿಕರಾದ ಸುಬ್ರಮಣಿ, ಸುರೇಶ್ ಹಾಗು ತ್ರಿಲೋಕ್ ರಾಜಪ್ಪ ಅವರುಗಳು ಅಭಿಪ್ರಾಯಿಸಿದ್ದಾರೆ.

ಒಟ್ಟಾರೆ ಮಳೆ ಮಾಯವಾಗಿರುವದರಿಂದ ಬಿಸಲಿನ ತಾಪಕ್ಕೆ ಸೊರಗುತ್ತಿರುವ ತೋಟವನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ಕೃಷಿಕರು, ಕಾಡಾನೆಗಳ ಕಾಟದಿಂದಲೂ ಆತಂಕಿತರಾಗಿದ್ದಾರೆ.