ನಾಪೆÇೀಕ್ಲು, ಜೂ. 21: ಸಮೀಪದ ಮರಂದೋಡ, ಯವಕಪಾಡಿ, ನಾಲಡಿ, ಕುಂಜಿಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಅವರು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ಆದುದರಿಂದ ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮತ್ತು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹಿಂದೆ ಬೆಟ್ಟಗಳಿಗೆ ಹೊಂದಿಕೊಂಡಿರುವ ಜನಕ್ಕೆ ಮಾತ್ರ ಕಾಡಾನೆ ಹಾವಳಿ ಕಂಡು ಬರುತ್ತಿತ್ತು. ಈಗ ಕಾಡಿನಿಂದ ನಾಡಿಗೆ ಬಂದು ಕಾಡಾನೆಗಳು ಜನರನ್ನು ಭಯಭೀತರನ್ನಾಗಿಸಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರು ತೋಟಗಳಲ್ಲಿ ಕೆಲಸ ನಿರ್ವಹಿಸಲು ಭಯಪಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಕಾಫಿ ತೋಟಗಳಲ್ಲಿ ಸಂಚರಿಸುವ ಕಾಡಾನೆಗಳ ಹಿಂಡು ತೆಂಗು, ಅಡಿಕೆ, ಬಾಳೆ ಸೇರಿದಂತೆ ಎಲ್ಲಾ ಕೃಷಿಗಳನ್ನು ಧ್ವಂಸ ಮಾಡುತ್ತಿದೆ ಎಂದ ಅವರು, ಅರಣ್ಯ ಇಲಾಖೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.