ಮಡಿಕೇರಿ, ಜೂ. 17: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಕಾನೂನಿನಲ್ಲಿ ಏನೇನು ಅಂಶಗಳಿವೆಯೋ ಅದನ್ನು ಪರಿಶೀಲಿಸಿ, ಪ್ರತೀ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿಯೇ ಸಭೆ ನಡೆಸಿ ಕ್ರಮ ಕೈಗೊಳ್ಳುವದಾಗಿ ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಭರವಸೆ ನೀಡಿದ್ದಾರೆ.
ನಗರದ ಅರಣ್ಯ ಭವನದಲ್ಲಿ ಜಿಲ್ಲೆಯಲ್ಲಿ ಮಾನವ, ಪ್ರಾಣಿ ಸಂಘರ್ಷದ ಪರಿಹಾರೋಪಾಯಗಳ ಕುರಿತು ವಿಧಾನ ಮಂಡಲದ ಸದಸ್ಯರು ಹಾಗೂ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಸಭೆಯಲ್ಲಿ ಹಲವು ಸಾರ್ವಜನಿಕರು ಆನೆ ಹಾವಳಿಯ ಬಗ್ಗೆ ಸಚಿವರ ಗಮನ ಸೆಳೆದರು. ಸುಂಟಿಕೊಪ್ಪದ ಗ್ರಾಮಸ್ಥ ಕೆ.ಡಿ. ರಾಮಯ್ಯ, ಅರಣ್ಯ ಸಚಿವರಿಗೆ ಆನೆ ಹಾವಳಿಯ ಬಗ್ಗೆ ಮನವಿ ಸಲ್ಲಿಸಿ ಮಾತನಾಡಿ, ಜಿಲ್ಲೆಯಲ್ಲಿ ಆನೆ ಹಾವಳಿ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿದೆ.
ತೋಟ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ತುಂಬಾ ಸಮಸ್ಯೆಯಾಗಿದೆ. 15 ವರ್ಷ ಕಷ್ಟ ಪಟ್ಟು ಬೆಳೆಸಿದ ಬೆಳೆಗಳು 15 ನಿಮಿಷದಲ್ಲಿ ಕಾಡಾನೆಗಳು ಹಾನಿ ಮಾಡುತ್ತವೆ. ರಸ್ತೆಯಲ್ಲಿ ಶಾಲಾ ಮಕ್ಕಳು, ವಾಹನ ಸಂಚರಿಸುವದೇ ಕಷ್ಟವಾಗಿದೆ. ಬದುಕುವದೇ ದುಸ್ತರ ವಾಗಿದೆ. ಆನೆಯನ್ನು ಸೆರೆಹಿಡಿದು ದೂರದ ಪ್ರದೇಶಕ್ಕೆ ರವಾನೆ ಮಾಡಿ ಎಂದು ಆಗ್ರಹಿಸಿದರು.
ಬೆಳೆಗಾರ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ಕಾಡಾನೆಗಳಿಗೆ ಕಾಡಿನಲ್ಲಿ ಮೇವು, ನೀರು ಸಿಗುತ್ತಿಲ್ಲ. ಕಾಡು ಆನೆಗಳಿಗೆ ವಾಸಕ್ಕೆ ಯೋಗ್ಯವಾಗಿಲ್ಲ. ಕಾಫಿ ತೋಟದಲ್ಲಿ ಬೀಡುಬಿಟ್ಟ ಕಾಡಾನೆ ಮತ್ತೆ ಕಾಡಿನತ್ತ ತೆರಳುವದೇ ಇಲ್ಲ. ಕಾಡಾನೆ ಸ್ಥಳಾಂತರ ಅಸಾಧ್ಯ. ಕಾಡಾನೆ ಪ್ರತೀ ದಿನ ಬೆಳೆ ನಾಶ ಮಾಡುತ್ತಿದ್ದು, ದಿನಂಪತ್ರಿ ದೂರು ನೀಡುವದು ಸಾಧ್ಯವಿಲ್ಲ. ಕಾಡಾನೆಯನ್ನು ಕೊಂದರೂ ಪರವಾಗಿಲ್ಲ. ಕಾಡಾನೆ ಹಾವಳಿಯನ್ನು ತಪ್ಪಿಸಬೇಕು. ದುಬಾರೆ ಅರಣ್ಯ ಹಾಗೂ ದುಬಾರೆ ಜಂಗಲ್ ಲಾಡ್ಜನ್ನು ಮುಚ್ಚುವಂತೆ ಆಗ್ರಹಿಸಿದರು.
ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರ, ನೀರು ಸಿಗದೆ ನಾಡಿನತ್ತ ಬರುತ್ತಿವೆ. ಅರಣ್ಯದಲ್ಲಿ ತೇಗದ ಮರವನ್ನು ತೆರವುಗೊಳಿಸಿ ಆಹಾರ, ನೀರು ಸಿಗುವಂತೆ ವ್ಯವಸ್ಥೆ ಕೈಗೊಳ್ಳುವಂತೆ ಆಗ್ರಹಿಸಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಅರಣ್ಯಾಧಿಕಾರಿಗಳು ಬಿಳಿಯಾನೆಗಳಾಗಿದ್ದಾರೆ. ತಿತಿಮತಿ ಸಮೀಪ ಅರಣ್ಯದಂಚಿನಲ್ಲಿ 150 ಕುಟುಂಬ ವಾಸ ಮಾಡುತ್ತಿದ್ದು, ಜಾಗ ಹಕ್ಕು ಪತ್ರ ನೀಡಲು ಪ್ರಸ್ತಾವನೆ ಸಲ್ಲಿಸಿದ್ದರೂ ಕ್ರಮಕೈಗೊಂಡಿಲ್ಲ. ಅವರಿಗೆ ಜಾಗ ನೀಡುವಂತೆ ಆಗ್ರಹಿಸಿದರು.
ಮಾಜಿ ಸಚಿವ ಯಂ.ಸಿ. ನಾಣಯ್ಯ ಮಾತನಾಡಿ, ಹತ್ತಾರು ವರ್ಷಗಳಿಂದ ಕಾಡಾನೆ ಹಾವಳಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಜನರ ಕಷ್ಟವೂ ಅಧಿಕವಾಗುತ್ತಿದೆ. ಆನೆ ಹಾವಳಿಯ ಬಗ್ಗೆ ಶಾಶ್ವತ ಪರಿಹಾರ ಅಗತ್ಯ. ಕಾಡುಪ್ರಾಣಿಗಳಿಂದ ಬೆಳೆಹಾನಿ ಹಾಗೂ ಪ್ರಾಣಹಾನಿ ಹೆಚ್ಚಾದಾಗ ಕಾನೂನಿನಲ್ಲಿ ಕೊಲ್ಲುವ ಅವಕಾಶಗಳಿವೆ. ಕೇಂದ್ರ ಪರಿಸರ ಸಚಿವರು ಹೆಚ್ಚು ಬೆಳೆ ಹಾನಿ ಉಂಟುಮಾಡುವ ಪ್ರಾಣಿಗಳನ್ನು ಕೊಲ್ಲಲು ಆದೇಶ ನೀಡಿರುವದು ಒಳ್ಳೆಯದು ಎಂದ ಅವರು ಪ್ರಾಣಿಗಳು ಹಿಂದಿಗಿಂತ ಈಗ 2-3 ಪಟ್ಟು ಹೆಚ್ಚಾಗಿವೆ. ಕಾಡಿನಲ್ಲಿ ಪ್ರಾಣಿಗಳ ಮಧ್ಯೆ ಸ್ಪರ್ಧೆ ಆರಂಭವಾಗಿದ್ದು, ಆಹಾರ ಸಿಗುತ್ತಿಲ್ಲ. ಕೇಂದ್ರ ಪರಿಸರ ಸಚಿವರು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು ಬೆಳೆ ಹಾನಿ ಮಾಡುವ ಪ್ರಾಣಿಗಳ ಮಾಹಿತಿ ನೀಡುವಂತೆ ಕೋರಿದ್ದರೂ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಬೆಳೆಗಾರರು ಜನಪ್ರತಿನಿಧಿಗಳು ಸೇರಿದಂತೆ ರಾಜ್ಯ ಸರ್ಕಾರದ ನಿಯೋಗ ತೆರಳಿ ಕೇಂದ್ರದೊಂದಿಗೆ ಸಮಾಲೋಚಿಸಲು ದಿನ ನಿಗದಿಗೊಳಿಸಿ ಎಂದು ನಾಣಯ್ಯ ಸಚಿವರನ್ನು ಆಗ್ರಹಿಸಿದರು.
ಹಿಂದಿನ ಸಭೆಯಲ್ಲಿ ಆನೆ - ಮಾನವ ಸಂಘರ್ಷದ ಸಾಧಕ - ಬಾಧಕಗಳ ಚರ್ಚೆ ನಡೆಸಲಾಗಿದೆ. ವನ್ಯಜೀವಿಗಳ ರಕ್ಷಣೆಯಾಗಬೇಕು. ವನ್ಯಜೀವಿಗಳನ್ನು ಕಾನೂನು ಬದ್ಧವಾಗಿ ಕೊಲ್ಲಲು ಅಸಾಧ್ಯ. ಆನೆ ಹಾವಳಿಯನ್ನು ತಡೆಗಟ್ಟಲು ಆನೆ ಕಂದಕಗಳ ನಿರ್ಮಾಣವಾಗುತ್ತಿದೆ. ಗಾರ್ಡ್‍ಗಳ ಸಂಖ್ಯೆ ಹೆಚ್ಚಿಸಲು ವೆಂಟೆಡ್ ಡ್ಯಾಂ ನಿರ್ಮಾಣ ಅಗತ್ಯವಾಗಿದ್ದು, ಕ್ರಮಕೈಗೊಳ್ಳ ಲಾಗುವದು. ಅರಣ್ಯದಲ್ಲಿರುವ ಕೆರೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಒಬ್ಬ ಅಧಿಕಾರಿ ಇಂತಿಷ್ಟು ಆನೆ ಹಿಡಿಯಲು ಅವಕಾಶವಿದ್ದು, ಪರಿಶೀಲಿಸಿ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುವದು ಎಂದು ಸಚಿವರು ಸಭೆಯ ಗಮನಕ್ಕೆ ತಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಕಳೆದ ಸಾಲಿನಲ್ಲಿ ಕೈಗೊಂಡ ನಿರ್ಣಯಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿ ವೀರಾಜಪೇಟೆ ತಾಲೂಕಿನಲ್ಲಿ ಅರಣ್ಯದಲ್ಲಿರುವ 10 ಕೆರೆಗಳ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯದ ಹದ್ದು ಬಸ್ತಿನಲ್ಲಿ ಮತ್ತು ಖಾಸಗಿ ಜಮೀನಲ್ಲಿರುವ ಗ್ಯಾಪ್ ಮುಚ್ಚುವ ಕಾರ್ಯಕ್ಕೆ ರೂ. 57 ಕೋಟಿ ಅನುದಾನ ಬೇಕಾಗಿದ್ದು, ಆನೆಕಂದಕ ನಿರ್ಮಾಣಕ್ಕೆ ರೂ. 227 ಕೋಟಿ ಬೇಕಾಗಿದೆ. ಸರ್ಕಾರ ರೂ. 5 ಕೋಟಿ ಅನುದಾನ ಒದಗಿಸಿದೆ. ರೇಡಿಯೋ ಕಾಲರ್ ಅಳವಡಿಸಲು ಆನೆಗಳನ್ನು ಗುರುತಿಸಲಾಗಿದೆ. ಎಸ್‍ಎಂಎಸ್ ಅಲರ್ಟ್ ವ್ಯವಸ್ಥೆ ಹಾಗೂ ಕಂಟ್ರೋಲ್ ರೂಂ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವನ್ಯಜೀವಿ ವಿಭಾಗದಲ್ಲಿ 10 ವಾಹನ ಒದಗಿಸಲಾಗಿದೆ. ಅರಣ್ಯಗಳಲ್ಲಿ ಆಹಾರ ಒದಗಿಸಲು ಬೀಜ ಬಿತ್ತುವ ಕಾರ್ಯ ಕೈಗೊಳ್ಳಲಾಗಿದೆ. ಅದಕ್ಕಾಗಿ ಬೇರೆ ಬೇರೆ ಜಾತಿಯ ಗಿಡಗಳ 5550 ಬೀಜ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 37 ಕೆರೆಗಳ ಹೂಳೆತ್ತುವದು ಹಾಗೂ 28 ಕೆರೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸಭೆÀಯಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಸದಸ್ಯೆ ಚಂದ್ರಕಲಾ, ಹಿರಿಯ ಅರಣ್ಯಾಧಿಕಾರಿ ಜಯರಾಮರೆಡ್ಡಿ, ಸಿಸಿಎಫ್ ದಾಸ್, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಮೂಡಾ ಅಧ್ಯಕ್ಷೆ ಸುರಯ್ಯ ಅಬ್ರಾರ್ ಹಾಗೂ ಇನ್ನಿತರ ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.