ವೀರಾಜಪೇಟೆ, ಜೂ. 25: ಉತ್ತಮ ಆರೋಗ್ಯದಿಂದಿರಲು ಯೋಗದಿಂದ ಮಾತ್ರ ಸಾಧ್ಯ. ಮನಸ್ಸಿಗೂ ಶಾಂತಿ ಉಂಟಾಗುತ್ತದೆ ಎಂದು ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾವೇರಿ ಪತಂಜಲಿ ಯೋಗ ಕೇಂದ್ರದ 17ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಯೋಗ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಎಸ್.ವಿ. ನರಸಿಂಹನ್ ಮಾತನಾಡಿ, ಭಾರತದ ಸಂಸ್ಕøತಿಯಲ್ಲಿ ಯೋಗದ ಮಹತ್ವ ಬಹಳ ವಿಸ್ತಾರವಾಗಿದೆ. ಪತಂಜಲಿ ಯೋಗ ಆರೋಗ್ಯದ ಒಂದು ಭಾಗ. ರೋಗಗಳು ಬಾರದ ಹಾಗೆ ಆರೋಗ್ಯದಿಂದಿರಲು ಯೋಗಭ್ಯಾಸ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದರು.

ಹಿರಿಯ ವಕೀಲರು ಹಾಗೂ ಸಮಾಜ ಸೇವಕ ಬಿ.ಬಿ. ನಾಣಯ್ಯ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಿಂದಲೇ ಮನೆ ಹಾಗೂ ಶಾಲೆಯಲ್ಲಿ ಯೋಗಾಭ್ಯಾಸ ಕಲಿಸಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯೋಗ ಗುರು ಸೀತಾರಾಮ್ ರೈ ಹಾಗೂ ಹಿರಿಯರಾದ ಬಿ. ಗಣಪತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಚೇಂದಂಡ ವಸಂತ ಸ್ವಾಗತಿಸಿ, ವಿ.ಕೆ. ಲಲಿತ ನಿರೂಪಿಸಿದರೆ, ಪೊನ್ನಣ್ಣ ವಂದಿಸಿದರು.