ಕುಶಾಲನಗರ, ಜೂ. 5: ಕುಶಾಲನಗರ ಸಮೀಪದ ಕೊಪ್ಪ ಕಾವೇರಿ ತಟದಲ್ಲಿ ಟಿಬೆಟಿಯನ್ ನಿರಾಶ್ರಿತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಇಲ್ಲಿಗೆ ಸಮೀಪದ ಕಾವೇರಿ ನದಿ ದಂಡೆಯ ಕೊಪ್ಪ ಕಾವೇರಿ ನದಿ ತಟದಲ್ಲಿ ವಿಶ್ವ ಪರಿಸರ ದಿನವನ್ನು ಬೈಲುಕೊಪ್ಪೆಯ ನಿರಾಶ್ರಿತ ಟಿಬೇಟನ್ ನಿವಾಸಿಗಳು ವಿಶೇಷವಾಗಿ ಆಚರಿಸಿದರು. ಕೊಪ್ಪ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಗಿಡವೊಂದನ್ನು ನೆಡುವ ಮೂಲಕ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಚಾಲನೆ ನೀಡಿದರು. ನಂತರ ನಡೆದ ಪರಿಸರ ಜಾಥಾ ಮುಖ್ಯ ರಸ್ತೆಗಾಗಿ ಸಾಗಿ ಕೊಪ್ಪ ಕಾವೇರಿ ಪ್ರತಿಮೆ ಬಳಿ ಸಮಾಪ್ತಿಯಾಯಿತು. ಮೆರವಣಿಗೆಯಲ್ಲಿ ಕಾರ್ಯಕ್ರಮ ಆಯೋಜಕರಾದ ನಳಂದ ವಿಶ್ವ ವಿದ್ಯಾಲಯದ ಧರ್ಮ ಗುರುಗಳಾದ ಕರ್ಮಪ್ಪ ರಿಂಪೋಚೆ, ವಿಧಾನ ಪರಿಷತ್ ಸದಸ್ಯ ವಿಜಯ್ ಶಂಕರ್, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಪಿರಿಯಾಪಟ್ಟಣ ಜೆಡಿಎಸ್ ಮುಖಂಡ ಕೆ. ಮಹದೇವ್, ಕಾಂಗ್ರೆಸ್ ಮುಖಂಡ ಸಿ.ಸಿ. ಸದಾಶಿವಪ್ಪ, ಕಾವೇರಿ ನದಿ ಸಂರಕ್ಷಣಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ರಾಮಣ್ಣ, ಕಾಫಿ ಉದ್ಯಮಿಗಳಾದ ವಿಶ್ವನಾಥನ್, ಸಾತಪ್ಪನ್ ಮೊದಲಾದವರಿದ್ದರು.

ಮುಸ್ಲಿಂ ಧರ್ಮಗುರು ಇಮಾಂಜಿ, ಭಾರತ್ ಮಾತಾ ಶಾಲಾ ಪ್ರಾಂಶುಪಾಲ ಫಾ.ಜೋಸೆಫ್, ವಕೀಲ ಜವರೇಗೌಡ ಬಾರವಿ ರವಿಚಂದ್ರನ್ ಕನ್ನಡ ಸಂಘದ ಬಬೀಂದ್ರಪ್ರಸಾದ್, ರವೀಂದ್ರಪ್ರಸಾದ್ ಮೊದಲಾದವರಿದ್ದರು.

ಈ ಸಂದರ್ಭ ಮಾತನಾಡಿದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಗಂಗಾನದಿ ಮಾದರಿಯಲ್ಲಿ ಕಾವೇರಿ ನದಿಯ ಸಂರಕ್ಷಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ. ಪರಿಸರ ಉಳಿದರೆ ನದಿ ತೊರೆ ಜಲಮೂಲಗಳು ಉಳಿಯುತ್ತವೆ. ಆದ್ದರಿಂದ ಸಾರ್ವಜನಿಕರು ಪರಿಸರವನ್ನು ಸಂರಕ್ಷಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.