ಗೋಣಿಕೊಪ್ಪಲು, ಜೂ. 27 : ಹಿಂದೂ ಸಂಘಟನೆ ಕಾರ್ಯಕರ್ತ ಕುಟ್ಟಪ್ಪ ಹತ್ಯೆ ಪ್ರಕರಣದಲ್ಲಿ ಬೇಜ ವಾಬ್ದಾರಿ ತೋರಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಟಿಪ್ಪು ಜಯಂತಿಯಂದು ಮಡಿಕೇರಿಯಲ್ಲಿ ಸಾವನ್ನಪ್ಪಿದ ಕುಟ್ಟಪ್ಪ ಸಾವಿಗೆ ಅಂದಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್, ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರ ನಿರ್ಲಕ್ಷ್ಯ ಸಾಬೀತಾಗಿದ್ದರೂ ಸರ್ಕಾರ ಕ್ರಮಕೈಗೊಳ್ಳದೆ ಮರೆ ಮಾಚುವ ಪ್ರಯತ್ನ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿಲ್ಲಾಧಿಕಾರಿ ರಜೆ ಹಾಕಿ ತೆರಳಿರುವದು ವ್ಯವಸ್ಥಿತ ಸಂಚು. ಆದ್ದರಿಂದಲೇ ಟಿಪ್ಪು ಜಯಂತಿಯಂದು ಕೋಮುಗಲಭೆ ಉಂಟಾಯಿತು ಎಂದರು.
ಸೋಮವಾರಪೇಟೆಯಲ್ಲಿ ಇತ್ತೀಚಿಗಿನ ಬೆಳವಣಿಗೆಯಂತೆ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುವ ಮೂಲಕ ಕಿಡಿಗೇಡಿ ಗಳಿಗೆ ಸರ್ಕಾರ ಪ್ರೇರಣೆಯಾಗುತ್ತಿದೆ ಎಂದು ಆರೋಪಿಸಿದರು.
ಕಳತ್ಮಾಡು ನಿವಾಸಿ ಯಶ್ವಂತ್ ಪಾಕ್ ಜೈಲಿನಲ್ಲಿರುವ ಬಗ್ಗೆ ಮಾಹಿತಿಯಂತೆ ನ್ಯಾಯ ಒದಗಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರಿಗೆ ಮನವಿ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ಅವರ ಮೂಲಕ ವ್ಯವಹರಿಸಲು ಮುಂದಾಗಿಸುವದಾಗಿ ತಿಳಿಸಿದರು.
ಯೋಗಾ ದಿನಾಚರಣೆಗೆ ನಟಿ ಬಿಪಾಶ ಬಸುವನ್ನು ಆಹ್ವಾನಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮುತಾಲಿಕ್, 1.3 ಕೋಟಿ ಹಣ ನೀಡಿ ಯೋಗ ತಿಳಿಯದವರನ್ನು ಆಹ್ವಾನಿಸುವ ವ್ಯವಸ್ಥೆ ಎಷ್ಟು ಸರಿ. ಯೋಗವನ್ನು ಆಕರ್ಷಿಸಲು ಇಂತಹ ನಟಿಯರ ಅವಶ್ಯಕತೆ ಇರಲಿಲ್ಲ. ಯೋಗದ ಪಾವಿತ್ರ್ಯತೆಗೆ ಇದು ಧಕ್ಕೆ ತಂದಿದೆ. ಯೋಗ ಎಂಬದು ಆಕರ್ಷಿಸುವ ವಿಷಯವಲ್ಲ ಎಂದರು.
ಇಂದು ರಾಜಕೀಯಕ್ಕಾಗಿ ಹಿಂದುತ್ವ ಎಂಬ ನಂಬಿಕೆಯಿಂದ ನಡೆದುಕೊಳ್ಳುವಂತಾಗಿದೆ. ನಾನು ಹಿಂದುತ್ವಕ್ಕೆ ಧಕ್ಕೆಯಾಗುವಾಗ ಹೊಂದಾಣಿಕೆ ಮಾಡಿಕೊಳ್ಳುವದಿಲ್ಲ ಎಂಬ ಕಾರಣಕ್ಕೆ ನನ್ನನ್ನು ಪಕ್ಷಗಳು ಸೇರಿಸಿಕೊಳ್ಳುತ್ತಿಲ್ಲ ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ವಿನಯ್, ಕಾರ್ಯಕರ್ತರುಗಳಾದ ಗಣೇಶ್ ಹಾಗೂ ಪ್ರಸಾದ್ ಭಟ್ ಉಪಸ್ಥಿತರಿದ್ದರು.