ಸೋಮವಾರಪೇಟೆ, ಜೂ. 17: ತಾಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಗೆ ಕಾಫಿ ತೋಟ ಹಾಗೂ ಬಾಳೆ ಫಸಲು ನಷ್ಟವಾಗಿದೆ. ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಮನಸೋಯಿಚ್ಛೆ ಧಾಳಿ ನಡೆಸಿದ್ದು, ಕೃಷಿಕರು ಕಂಗಾಲಾಗಿದ್ದಾರೆ.

ಕೂತಿ ಗ್ರಾಮದ ಭರತ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಕಾಫಿ ಗಿಡಗಳನ್ನು ಹಾನಿ ಪಡಿಸಿದ್ದು, ತೋಟದೊಳಗಿದ್ದ ಫಸಲು ಬಿಟ್ಟಿರುವ ಬಾಳೆಗಿಡಗಳನ್ನು ಸಂಪೂರ್ಣ ನಾಶ ಪಡಿಸಿದೆ. ತೋಟಕ್ಕೆ ಹಾಕಲೆಂದು ಇಟ್ಟಿದ್ದ 17 ಚೀಲ ಗೊಬ್ಬರವನ್ನು ನಾಶ ಪಡಿಸಿರುವ ಆನೆಗಳು ಗ್ರಾಮದಲ್ಲಿ ಭಯಭೀತ ವಾತಾವರಣ ಮೂಡಿಸಿವೆ.

ಈ ಭಾಗದಲ್ಲಿ ಆಗಿಂದಾಗ್ಗೆ ಕಾಡಾನೆ ಧಾಳಿ ನಡೆಯುತ್ತಿದ್ದು, ಗ್ರಾಮಸ್ಥರು ಆತಂಕದಲ್ಲೇ ಬದುಕುವಂತಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ತುರ್ತಾಗಿ ಗಮನಹರಿಸಿ ಆನೆಗಳನ್ನು ಬೇರೆಡೆಗೆ ಅಟ್ಟಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.