ಸುಂಟಿಕೊಪ್ಪ, ಮೇ 10: ಸರಕಾರದ ಆಸ್ತಿಯನ್ನು ಜತನದಿಂದ ಪೋಷಿಸದಿದ್ದರೆ ಕಂಡವರ ಪಾಲಾಗುತ್ತದೆ ಎಂಬದಕ್ಕೆ ಸಾಕ್ಷಾತ್ ಉದಾಹರಣೆ ಇಲ್ಲಿ ಕಾಣಬಹುದಾಗಿದೆ.
ಮಾದಾಪುರದಿಂದ ಗರ್ವಾಲೆಗೆ ಹೋಗುವ ರಸ್ತೆಯ ಬದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸನಿಹದಲ್ಲೇ ಜಿ.ಪಂ. ತೋಟಗಾರಿಕಾ ಇಲಾಖೆಗೆ ಸೇರಿದ ಜೇನು ಕೃಷಿ ಮಧುವನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಭೂತ ಬಂಗಲೆಯಂತಾಗಿರುವ ಈ ಜೇನು ಕೃಷಿ ಕೇಂದ್ರದ 1 ಏಕರೆ ಜಾಗದಲ್ಲಿ ಬೆಲೆಬಾಳುವ ಮರ ಗಿಡಗಳು ಬೆಳೆದು ಧರೆಗೆ ಉರುಳಿ ಬಿದ್ದಿದೆ.
ಮಾದಾಪುರ ವಿಭಾಗದ ಕೃಷಿಕರು ಇಲ್ಲಿ ಮಧುವನ ಕೇಂದ್ರ ಇರುವದನ್ನು ಮರೆತಂತಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡುವದಿಲ್ಲ. ಮಧುವನ ಕೇಂದ್ರದಲ್ಲಿ ಇರಬೇಕಾದ ಜೇನು ಪೆಟ್ಟಿಗೆಯನ್ನು ಪ್ರದರ್ಶನಕ್ಕೆ ಇರಿಸಿದಂತೆ ಅಳವಡಿಸಿದ್ದಾರೆ. ನೀರಿನ ಸೌಕರ್ಯ, ವಿದ್ಯುತ್ ಸಂಪರ್ಕ ಇಲ್ಲದೆ ಭೂತ ಬಂಗಲೆಯಂತಿರುವ ಈ ಮಧುವನ ಕೇಂದ್ರವನ್ನು ಜಿ.ಪಂ. ತೋಟಗಾರಿಕೆ ಇಲಾಖೆ ಮರೆತಂತಿದೆ. ವರ್ಷಕ್ಕೊಮ್ಮೆ ಜೇನು ಕೃಷಿ ಪೆಟ್ಟಿಗೆಯನ್ನು ಕೃಷಿಕರಿಗೆ ಸಬ್ಸಿಡಿ ದರದಲ್ಲಿ ವಿತರಿಸಲು ಆದೇಶವಿದೆ. ಆದರೆ ಅದೆಷ್ಟು ಕೃಷಿಕರಿಗೆ ದೊರೆತಿದೆ ಎನ್ನುವದು ಬಹಿರಂಗವಾಗಿಲ್ಲ. ತನಿಖೆ ಕೈಗೊಂಡಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ.
ಕೇಳುವವರು ಇಲ್ಲದ ಇಲ್ಲಿನ ಜೇನು ಕೃಷಿ ಕೇಂದ್ರಕ್ಕೆ ಸೇರಿದ ಬೆಲೆಬಾಳುವ ಮರಗಳು ಧರೆಗೆ ಉರಳಿ ಬಿದ್ದಿದ್ದು ತೋಟಗಾರಿಕೆ ಇಲಾಖೆಯವರಿಗೆ ಇದರ ಪರಿವೇ ಇಲ್ಲದಂತಾಗಿದೆ ಸಂಬಂಧಿಸಿದ ಅಧಿಕಾರಿಗಳು ಈ ಮಧುವನ ಕೇಂದ್ರದ ಬಗ್ಗೆ ಗಮನಹರಿಸುವಂತಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.