ಮಡಿಕೇರಿ ಜೂ.10 : ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರ ಹತ್ಯೆಯಾಗಿದೆಯೆಂದು ಹೇಳಿಕೆ ನೀಡು ತ್ತಿರುವವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಕೊಡಗು ಸೌಹಾರ್ದ ವೇದಿಕೆಯ ಪ್ರಮುಖ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲು ಅರಣ್ಯ ಪ್ರದೇಶದಲ್ಲಿ ಸ್ತÀಂಭಗಳನ್ನು ಅಳವಡಿಸಿದವರನ್ನು ಬಂಧಿಸಿ, ಸ್ಥಳದಲ್ಲಿರುವ ಸ್ತಂಭಗಳನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದು ಕೊಳ್ಳಬೇಕೆಂದು ಒತ್ತಾಯಿಸಿದರು. ಮುಂದಿನ ಒಂದು ತಿಂಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸೌಹಾರ್ದ ವೇದಿಕೆ ಮೂಲಕ ಮುಖ್ಯಮಂತ್ರಿ ಗಳನ್ನು ಭೇಟಿಯಾಗಿ ಮನವಿ ಸಲ್ಲಿಸ ಲಾಗುವದು ಮತ್ತು ಸಿಬಿಐ ತನಿಖೆಗೆ ಆಗ್ರಹಿಸಲಾಗುವದೆಂದು ಎ.ಕೆ.ಸುಬ್ಬಯ್ಯ ಹೇಳಿದರು.

ಸ್ತಂಭಗಳನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದು ಅಪರಾಧವೆ ಹೊರತು ಸ್ತಂಭಗಳನ್ನು ಕೆಡವಿರುವದು ಅಪರಾಧವಲ್ಲವೆಂದು ಅವರು ಸಮರ್ಥಿಸಿಕೊಂಡರು. ಜಿಲ್ಲೆಯಲ್ಲಿ ಜನಾಂಗೀಯ ದ್ವೇಷಕ್ಕೆ, ಸಂಘರ್ಷಕ್ಕೆ ಅವಕಾಶ ನೀಡಿದೆ, ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆನ್ನುವ ಉದ್ದೇಶದಿಂದ ಎಲ್ಲಾ ಸಮಾಜದವರು ಸೇರಿ ಸೌಹಾದರ್À ವೇದಿಕೆಯನ್ನು ರಚಿಸಲಾಗಿದೆ. ಈ ವೇದಿಕೆ ಮೂಲಕ ಜಿಲ್ಲಾ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವದೆಂದರು.

ಸ್ತಂಭ ಅಳವಡಿಕೆ ಸಂದರ್ಭ ಅರಣ್ಯ ಇಲಾಖೆ ಮೌನವಹಿಸಿರುವದನ್ನು ಗಮನಿಸಿದರೆ, ಈ ಪ್ರಕರಣದಲ್ಲಿ ಇಲಾಖೆ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ ಸುಬ್ಬಯ್ಯ, ಸ್ತಂಭ ಅಳವಡಿಸಿದ 23 ಮಂದಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಈ ಹಿಂದೆಯೆ ಅರಣ್ಯ ಇಲಾಖೆ, ಅಕ್ರಮವಾಗಿ ಸ್ಥಾಪಿಸಲಾಗಿದ್ದ ಸ್ತಂಭವನ್ನು ಸ್ಥಳಾಂತರಿಸಿದ್ದರೆ ಈಗಿನ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟರು. ದೇವಟ್ ಪರಂಬುವಿನಲ್ಲಿ ಕೊಡವರ ಹತ್ಯೆಯಾಗಿದೆ ಮತ್ತು ಕಾವೇರಿ ನದಿಯಲ್ಲಿ ರಕ್ತ ಹರಿದಿದೆ ಎನ್ನುವದಕ್ಕೆ ದಾಖಲೆಯನ್ನು ನೀಡಿದರೆ ಸೌಹಾರ್ದ ವೇದಿಕೆ ತನ್ನ ನಿಲುವನ್ನು ಪುನರ್ ವಿಮರ್ಶಿಸಲಿದೆ ಎಂದು ಸುಬ್ಬಯ್ಯ ಸ್ಪಷ್ಟಪಡಿಸಿದರು.

ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರ ಹತ್ಯೆಯಾಗಿದೆಯೆಂದು ಸುಳ್ಳು ಹೇಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲಾಗುತ್ತಿದೆ ಮತ್ತು ಜನಾಂಗೀಯ ಸಂಘರ್ಷಕ್ಕೆ ನಾಂದಿ ಹಾಡಲಾಗುತ್ತಿದೆಯೆಂದು ಸುಬ್ಬಯ್ಯ ಆರೋಪಿಸಿದರು. ಸಾವಿರಾರು ಕೊಡವರ ಹತ್ಯೆಯಾಗಿದ್ದರೆ, ಹತ್ಯೆಯಾದವರ ಸಂಪೂರ್ಣ ಮಾಹಿತಿಯನ್ನು ನೀಡಲಿ ಎಂದು ಅವರು ಸವಾಲು ಹಾಕಿದರು.

ಪಟ್ಟೋಲೆ ಪಳಮೆ ಪುಸ್ತಕವನ್ನು ಸರಿಯಾಗಿ ಓದದೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಟೀಕಿಸಿದ ಅವರು, ಪುಸ್ತಕದ ಕೆಲವು ಅಂಶಗಳನ್ನು ವಿವರಿಸಿದರು. ಟಿಪ್ಪು ಸುಲ್ತಾನನ 15 ಸಾವಿರ ಸೈನಿಕರು ಕೊಡವರ ವಿರುದ್ಧ ಧÀಂಗೆ ಏಳಲು ಮುಂದಾದಾಗ 6 ಸಾವಿರ ಕೊಡವರು ಇವರನ್ನು ಹತ್ಯೆಗೈಯ್ದು ಪರಾಕ್ರಮ ಮೆರೆದಿದ್ದಾರೆ. ಈ ಪರಾಕ್ರಮ ಮೆರೆದ ಉಲುಗುಲಿ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣವಾದಲ್ಲಿ ತಮ್ಮ ಅಭ್ಯಂತರವಿಲ್ಲವೆಂದು ಸ್ಪಷ್ಟಪಡಿಸಿದರು. ಪಟ್ಟೋಲೆ ಪಳಮೆಯಲ್ಲಿ 1.11 ಲಕ್ಷ ಮಂದಿಯನ್ನು ಟಿಪ್ಪು ಸುಲ್ತಾನನ ಸೈನಿಕರು ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಬಲತ್ಕಾರವಾಗಿ ಮತಾಂತರ ಮಾಡಿದ ಉಲ್ಲೇಖವಿದೆಯೆ ಹೊರತು ಎಲ್ಲೂ ಹತ್ಯೆಯಿಂದ ರಕ್ತ ಹರಿದ ದಾಖಲೆಗಳಿಲ್ಲವೆಂದು ಸುಬ್ಬಯ್ಯ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಜನಸಂಖ್ಯೆ 6 ಲಕ್ಷವಿದ್ದು, ಟಿಪ್ಪು ಹತ್ಯೆ ಮಾಡದೆ ಇದ್ದಿದ್ದರೆ ಕೊಡವರ ಸಂಖ್ಯೆ 2 ಕೋಟಿ ಇರುತ್ತಿತ್ತು ಎಂದು ಹೇಳಿಕೆ ನೀಡುತ್ತಿರುವವರು ರೋಗಿಷ್ಟ ಮನಸ್ಸಿನವರೆಂದು ಸುಬ್ಬಯ್ಯ ಆರೋಪಿಸಿದರು. ಭಾಗಮಂಡಲದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗೆ ಪ್ರಜ್ಞಾವಂತ ಕೊಡವರು ಬೆಂಬಲ ನೀಡದಿರುವದು ಸ್ವಾಗತಾರ್ಹವೆಂದ ಅವರು, ಪ್ರತಿಭಟನೆ ವಿಫಲವಾಗಿದೆ ಯೆಂದು ಅಭಿಪ್ರಾಯಪಟ್ಟರು. ಕೊಡವ ಮುಖಂಡರು ಚರಿತ್ರೆಯನ್ನು ಓದುವ ಮೂಲಕ ಸತ್ಯಾಂಶವನ್ನು ಅರಿಯಬೇಕೆಂದು ಸಲಹೆ ನೀಡಿದ ಸುಬ್ಬಯ್ಯ, ಕೊಡವರ ಗೌರವಕ್ಕೆ ಧಕ್ಕೆ ಉಂಟಾಗುವದನ್ನು ತಡೆಯಬೇಕೆಂದು ಒತ್ತಾಯಿಸಿದರು.

ಸಧ್ಯದಲ್ಲೆ ಸೌಹಾರ್ದ ವೇದಿಕೆಯ ಬೃಹತ್ ಸಭೆ ನಡೆಸಲಾಗುತ್ತಿದ್ದು, ದೇವಟ್‍ಪರಂಬುವಿಗೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ಹೊಂದಿರುವವರು ಸಾಕ್ಷ್ಯಾಧಾರ ಸಹಿತ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಬಹುದು. ಘಟನೆ ನಡೆದಿದೆ ಎಂದು ಸಾಬೀತಾದರೆ ವೇದಿಕೆ ತನ್ನ ನಿಲುವಿನ ಬಗ್ಗೆ ಮತ್ತೊಮ್ಮೆ ಚಿಂತಿಸಲಿದೆಯೆಂದು ಎ.ಕೆ. ಸುಬ್ಬಯ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮಡಿಕೇರಿ ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಸೌಹಾರ್ದ ವೇದಿಕೆಯ ಪ್ರಮುಖರಾದ ದಂಬೆಕೋಡಿ ಆನಂದ, ಕುಡಿಯರ ಮುತ್ತಪ್ಪ, ಮಾಜಿ ಶಾಸಕ ಹೆಚ್.ಡಿ. ಬಸವರಾಜು ಮತ್ತು ಚೇರಂಡ ನಂದಾ ಸುಬ್ಬಯ್ಯ ಉಪಸ್ಥಿತರಿದ್ದರು.