ಸೋಮವಾರಪೇಟೆ, ಜೂ. 23: ವೈಯುಕ್ತಿಕ ವಿಚಾರಗಳಿಗೆ ನಡೆದ ಹಲ್ಲೆ ಘಟನೆಯನ್ನು ಮುಂದಿಟ್ಟುಕೊಂಡು ಸೋಮವಾರಪೇಟೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ರಾಜಕೀಯ ಪಕ್ಷವೊಂದು ಮುಂದಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಆಸ್ಪದ ನೀಡಬಾರದು. ಸೋಮವಾರಪೇಟೆಗೆ ದಕ್ಷ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಬೇಕು. ತಕ್ಷಣ ಶಾಂತಿ ಸಭೆ ನಡೆಸಬೇಕು ಎಂದು ಜಾತ್ಯತೀತ ಜನತಾದಳ ಒತ್ತಾಯಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ಈ ಹಿಂದೆ ಟಿಪ್ಪು ಜಯಂತಿ ಸಂದರ್ಭ ನಡೆದ ಗಲಭೆಯಲ್ಲಿ ಎರಡು ಜೀವಗಳು ಬಲಿಯಾಗಿವೆ. ನಂತರವೂ ಆಗಿಂದ್ದಾಗ್ಗೆ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳಕ್ಕೆ ಕೋಮು ಬಣ್ಣ ಹಚ್ಚಿ ಬಿಜೆಪಿ ಪಕ್ಷದವರು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ತಾ. 19 ರಂದು ನಡೆದ ಮೋಹನ್ ಎಂಬವರ ಮೇಲಿನ ಹಲ್ಲೆಯ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ಸಂದರ್ಭ ಪೊಲೀಸ್ ಠಾಣಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ನಡೆದಿರುವದು ಖಂಡನೀಯ. ಸಮಾಜದಲ್ಲಿ ಕೋಮು ಸಾಮರಸ್ಯ ಕದಡಲು ಯಾವದೇ ಧರ್ಮದ ವ್ಯಕ್ತಿಗಳು ಮುಂದಾದರೂ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಗೋಷ್ಠಿಯಲ್ಲಿದ್ದ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ ಆಗ್ರಹಿಸಿದರು. ಮೋಹನ್ ಅವರ ಮೇಲೆ ಹಲ್ಲೆ ನಡೆಸಿದ ನಿಜವಾದ ಆರೋಪಿಗಳನ್ನು ಬಿಟ್ಟು ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಬಷೀರ್, ಪುತ್ತು ಅವರುಗಳು ಘಟನೆ ನಡೆದ ಸಂದರ್ಭ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದರು. ಆದರೂ ಯಾವದೇ ತನಿಖೆ ನಡೆಸದೇ ಇವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೂರಿದರು. ತಾ.22ರಂದು ಪ್ರತಿಭಟನೆ ನಂತರ ಅಮಾಯಕರ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಐಗೂರಿನಲ್ಲಿ ಪ್ರಾರ್ಥನೆಗೆ ತೆರಳಿದ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡಲಾಗಿದೆ. ಸೋಮವಾರಪೇಟೆ ಪಟ್ಟಣ ಹಾಗೂ ಐಗೂರಿನಲ್ಲಿ ಮಾತ್ರ ಇಂತಹ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ವಿಜಯ ಆಗ್ರಹಿಸಿದರು.

ಇಂತಹ ಘಟನೆಗಳಿಂದ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಹೆದರುವಂತಾಗಿದೆ. ಕ್ಷುಲ್ಲಕ ಘಟನೆಗಳನ್ನೇ ಬಳಸಿಕೊಂಡು ಬಿಜೆಪಿ ರಾಜಕೀಯ ಸಂಘಟನೆಗೆ ಮುಂದಾಗಿದೆ ಎಂದು ಆರೋಪಿಸಿದ ವಿ.ಎಂ. ವಿಜಯ, ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ಕೃಷ್ಣಪ್ಪ, ತಾ.ಪಂ. ಮಾಜೀ ಸದಸ್ಯ ಹೆಚ್.ಆರ್. ಸುರೇಶ್ ಉಪಸ್ಥಿತರಿದ್ದರು.