ಮಡಿಕೇರಿ, ಮೇ 16: ಕೊಡಗನ್ನು ಕ್ಷಾತ್ರ ತೇಜರ ಭೂಮಿಯನ್ನು ಭೋಗ ಭೂಮಿ ಎಂದು ಪರಿಗಣಿಸದೆ ನಮ್ಮ ಸಮಾಜ ಬಾಂಧವರು ಸಮಗ್ರ ಹಿಂದೂ ಸಮಾಜದ ಜೊತೆಗೂಡಿ ಸಹಬಾಳ್ವೆ ನಡೆಸುವ ಮೂಲಕ ದೇಶದ ಅಭ್ಯುದಯಕ್ಕೆ ಶ್ರಮಿಸಬೇಕು ಎಂದು ಮಾಣಿಲ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಮಹಾಸ್ವಾಮೀಜಿ ಕುಲಾಲ್ (ಕುಂಬಾರ) ಸಮಾಜದ ಪೀಠಾಧಿಪತಿಗಳಾಗಿ ಆಶೀರ್ವಚನ ನೀಡಿದರು. ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ವತಿಯಿಂದ ಓಂಕಾರ ಸದನದಲ್ಲಿ ನಡೆದ ಸತ್ಯನಾರಾಯಣ ದೇವರ ಪೂಜೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಪ್ರತಿಯೊಬ್ಬ ಸಮಾಜ ಬಂಧುಗಳು ಧಾರ್ಮಿಕ ಆಚರಣೆಯನ್ನು ವಿಧಿವತ್ತಾಗಿ ಅನುಷ್ಠಾನಕ್ಕೆ ತಂದುಕೊಂಡು ನಮ್ಮ ಪೂರ್ವ ಪರಂಪರೆಯನ್ನು ಕಾಪಾಡಿಕೊಳ್ಳುವ ಮೂಲಕ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಕೌಟುಂಬಿಕ ಸಹಬಾಳ್ವೆ ನಡೆಸುವಂತೆ ತಿಳಿ ಹೇಳಿದರು. ಪ್ರತಿಮನೆಯಲ್ಲಿ ತಾಯಿಯಂದಿರ ಸಂಸ್ಕಾರ ಪೂರ್ಣ ಜೀವನವನ್ನು ಆಚರಣೆಯನ್ನು ತರುವ ಮೂಲಕ ವಿಕೃತಿಗೆ ಅವಕಾಶ ನೀಡದೆ ಪತ್ನಿ- ಮಕ್ಕಳೊಂದಿಗೆ ಸಮರಸ ಬದುಕು ಸಾಗಿಸುವಂತೆ ಆಗ್ರಹಪೂರ್ವಕ ನುಡಿಯಾಡಿದರು.
ವೇದಿಕೆಯಲ್ಲಿ ಸಮಾಜದ ಅಧ್ಯಕ್ಷ ನಾಣಯ್ಯ, ಓಂಕಾರೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಂಪತ್ಕುಮಾರ್, ಪಾರುಪತ್ಯೆಗಾರ ಚಿ.ನಾ. ಸೋಮೇಶ್ ಉಪಸ್ಥಿತರಿದ್ದರು.
ರಾಘವೇಂದ್ರ ಭಟ್ ಅವರು ಶ್ರೀ ಸತ್ಯನಾರಾಯಣ ದೇವರ ಪೂಜೆಯ ವಿಧಿ ವಿಧಾನಗಳನ್ನು ನಡೆಸಿದರು.