ಕರಿಕೆ, ಜೂ. 23: ಮಾರಕ ಕಾಯಿಲೆ ಡೆಂಗಿಗೆ ಜಿಲ್ಲೆಯ ಗಡಿಭಾಗ ಕರಿಕೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಇದರೊಂದಿಗೆ ಮಾರಕ ಕಾಯಿಲೆಗೆ ಒಟ್ಟು ಮೂರು ಮಂದಿ ಬಲಿಯಾದಂತಾಗಿದೆ.

ಕೇರಳ ಗಡಿಭಾಗವಾಗಿರುವ ಕರಿಕೆ ಗ್ರಾಮದಲ್ಲಿ ಡೆಂಗಿ ಜ್ವರ ವ್ಯಾಪಕವಾಗಿ ಹರಡಿದ್ದು, ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಇಂದು ಕರಿಕೆ- ಎಳ್ಳುಕೊಚ್ಚಿ ಗ್ರಾಮ ನಿವಾಸಿ ಕಮಲಾಕ್ಷ (ಕುಮಾರ) ಅವರ ಪತ್ನಿ ಶೀಲಾವತಿ (56) ಎಂಬವರು ಈ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಡೆಂಗಿ ಸೋಂಕು ತಗಲಿದ್ದ ಶೀಲಾವತಿ ಅವರನ್ನು ಕಳೆದ 4 ದಿನಗಳ ಹಿಂದೆ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ತೀವ್ರಗೊಂಡ ಹಿನ್ನೆಲೆಯಲ್ಲಿ ನಿನ್ನೆ ಅವರನ್ನು ಮಂಗಳೂರಿನ ಫಾದರ್ ಮುಲ್ಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಈ ಹಿಂದೆ ಅದೇ ಗ್ರಾಮದ ಪಾಪುಟ್ಟಿ ಎಂಬವರು ಸಾವನ್ನಪ್ಪಿದ್ದು, ಮೊನ್ನೆ ಹೊಸಮನೆ ಪ್ರಮೋದ್ ಎಂಬವರು ಸಾವನ್ನಪ್ಪಿದ್ದರು. ಕರಿಕೆ ವ್ಯಾಪ್ತಿಯಲ್ಲಿ ಇದೀಗ ನೂರಕ್ಕೂ ಅಧಿಕ ಮಂದಿಗೆ ಡೆಂಗಿ ಬಾದಿಸಿರುವದಾಗಿ ಹೇಳಲಾಗುತ್ತಿದೆ.

ಕ್ರಮಕ್ಕೆ ಆಗ್ರಹ

ಕರಿಕೆ ವ್ಯಾಪ್ತಿಯಲ್ಲಿ ಡೆಂಗಿ ವ್ಯಾಪಕವಾಗಿ ಹರಡುತ್ತಿದ್ದು,

ಜೀವ ಹಾನಿಯಾಗುತ್ತಿದ್ದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ರೋಗ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಗ್ರಾ.ಪಂ. ಅಧ್ಯಕ್ಷ ಹೊಸಮನೆ ಚಂಗಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

-ಸುಧೀರ್, ಸುನಿಲ್.