ಕೂಡಿಗೆ, ಜೂ. 9: ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಎಸ್.ಎಲ್.ಎನ್. ಕಾಫಿ ಪುಡಿ ಐಟಿಸಿ ಘಟಕದಲ್ಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಜಯಪ್ರಕಾಶ್ (22) ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಎಕ್ಸ್‍ಟೆನ್ಷನ್ ಉಪಕರಣ ಸ್ಫೋಟಗೊಂಡ ಪರಿಣಾಮ ಶೇ. 90 ರಷ್ಟು ಸುಟ್ಟ ಗಾಯಗಳಾಗಿದ್ದು, ಈತನನ್ನು ಮೈಸೂರಿನ ಬಿ.ಜಿ.ಎಸ್. ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ಈತ ತೊರೆನೂರು ಗ್ರಾಮದ ನಿವಾಸಿ ಗಣೇಶಾಚಾರಿ ಮತ್ತು ವಿನೋದ್ ಅವರ ಪುತ್ರನಾಗಿದ್ದಾನೆ.

ಈ ಸಂಸ್ಥೆಯಲ್ಲಿ ಕಾರ್ಮಿಕರಿಗಾಗಿ ಪ್ರಾಣ ರಕ್ಷಣೆಗೆ ಬೇಕಾಗುವ ಸವಲತ್ತುಗಳು ಕಡಿಮೆಯಿವೆ, ಕಾರ್ಮಿಕರಿಗೆ ಮೂಲಭೂತ ಸಮಸ್ಯೆಗಳ ಕೊರತೆಯಿದೆ ಎಂದು ಕೆಲವು ಕಾರ್ಮಿಕರು ದೂರಿದ್ದಾರೆ. ಸಾವನ್ನಪ್ಪಿರುವ ಯುವಕನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರ ಘೋಷಣೆ: ಸಂಜೆ ಮೈಸೂರಿನಿಂದ ಆಗಮಿಸಿದ ಮೃತದೇಹದೊಂದಿಗೆ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಕೈಗಾರಿಕಾ ಘಟಕಕ್ಕೆ ತೆರಳಿ ಪರಿಹಾರಕ್ಕಾಗಿ ಆಗ್ರಹಿಸಿದರು. ಈ ಸಂದರ್ಭ ಸಂಸ್ಥೆಯ ಮಾಲೀಕರಾದ ಸಾತಪ್ಪನ್ ಹಾಗೂ ವಿಶ್ವನಾಥನ್ ಅವರುಗಳು ರೂ. 20 ಲಕ್ಷ ಪರಿಹಾರ ನೀಡುವದಲ್ಲದೆ, ಮೃತನ ಸಹೋದರರಿಗೆ ಕೆಲಸ ಕೊಡಿಸುವದಾಗಿ ಭರವಸೆ ನೀಡಿದರು.