ಗೋಣಿಕೊಪ್ಪಲು,ಜೂ.10: ಕಾಳು ಮೆಣಸು ವ್ಯಾಪಾರಿಯ ನಿರ್ಲಕ್ಷ್ಯ, ಕಳೆದೆರಡು ದಿನಗಳಿಂದ ರಜೆಯ ಮೇಲೆ ತೆರಳಿದ್ದ ಭದ್ರತಾ ಸಿಬ್ಬಂದಿ, ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರವೇಶಿಸುವ ಎರಡು ಗೇಟ್‍ಗಳಿಗೆ ರಾತ್ರಿ ವೇಳೆ ಬೀಗ ಜಡಿಯುತ್ತಿದ್ದು, ತಾ.9 ರಂದು ಬೀಗ ಹಾಕದೆ ಹಾಗೇ ಬಿಟ್ಟಿರುವದು. ಈ ನಡುವೆ ಕಾಳು ಮೆಣಸು ವ್ಯಾಪಾರಿ ಸೌರವ್ ಬಂಕ ಕೆಲಸದ ನಿಮಿತ್ತ ಮೂರು ದಿನದ ಹಿಂದೆಯೇ ರಾಮೇಶ್ವರಕ್ಕೆ ತೆರಳಿರುವದು. ಎಪಿಎಂಸಿ ಚುನಾವಣೆ ಸನ್ನಿಹಿತವಾದ ಹಿನ್ನೆಲೆ ಎಪಿಎಂಸಿ ಆಡಳಿತ ತಹಶೀಲ್ದಾರ್ ಆಡಳಿತಕ್ಕೆ ಒಳಪಟ್ಟಿರುವ ಬೆನ್ನಲ್ಲೇ ಇದೇ ಪ್ರಥಮ ಬಾರಿಗೆ ಎಪಿಎಂಸಿ ಇತಿಹಾಸದಲ್ಲಿಯೇ ದೊಡ್ಡ ಮೊತ್ತ ಅಂದರೆ ಸುಮಾರು ರೂ.9 ಲಕ್ಷ ಮೊತ್ತದ ಕಾಳು ಮೆಣಸು ಹಾಗೂ ನಗದನ್ನು ವ್ಯಾಪಾರಿ ಕಳೆದುಕೊಂಡಿರುವ ಘಟನೆ ನಡೆದಿದೆ. ತಾ.9 ರಂದು ಸುಮಾರು ಮಧ್ಯರಾತ್ರಿ 12 ಗಂಟೆಯ ನಂತರ ಎಪಿಎಂಸಿ ಗೋದಾಮು ಸಂಖ್ಯೆ 10 ರಲ್ಲಿ ದಾಸ್ತಾನಿರಿಸಿದ್ದ ಕಾಳುಮೆಣಸು ಚೀಲಗಳಲ್ಲಿ ಒಟ್ಟು ರೂ.9 ಲಕ್ಷ ಮೌಲ್ಯದ 26 ಚೀಲಗಳು( ತಲಾ 50ಕೆ.ಜಿ.) ಹಾಗೂ ಗೋದಾಮು ಒಳಗಡೆ ಇದ್ದ ಪುಟ್ಟ ಕಚೇರಿಯ ಟೇಬಲ್ ಲಾಕರ್‍ನಲ್ಲಿಟ್ಟಿದ್ದ ಸುಮಾರು ರೂ.6.40 ಲಕ್ಷ ಮೊತ್ತದ ನಗದನ್ನು ಖದೀಮರು ಚಾಣಾಕ್ಷತನದಿಂದ ಅಪಹರಿಸಿದ ಘಟನೆ ನಡೆದಿದೆ.ಗೋದಾಮು ಶೆಟರನ್ನು ಜಾಣಾಕ್ಷತನದಿಂದ ತೆಗೆದು ಖದೀಮರು ಒಳನುಸುಳಿದ್ದಾರೆ.
ಭಾರೀ ನಗದನ್ನು ಸಾಧಾರಣಾ ಟೇಬಲ್ ಲಾಕರ್‍ನಲ್ಲಿ ಇರಿಸಿರುವದೂ ಖದೀಮರಿಗೆ ಹಾದಿ ಸುಗಮಗೊಳಿಸಿದಂತಾಗಿದೆ.
ವರ್ತಕ ಸೌರವ್ ಬಂಕ ಸುಮಾರು 10 ವರ್ಷಗಳಿಂದ ಗೋಣಿಕೊಪ್ಪಲಿನಲ್ಲಿ ಕಾಳುಮೆಣಸು ರಫ್ತುದಾರನಾಗಿ ಗುರುತಿಸಿಕೊಂಡಿದ್ದು, ಸಾರ್ವಜನಿಕವಾಗಿಯೂ ಸನ್ನಡತೆಯನ್ನು ಹೊಂದಿದ್ದರು ಎನ್ನಲಾಗಿದೆ. ಇವರ ಮಳಿಗೆಯಲ್ಲಿ ಸಂತೋಷ್ ಎಂಬಾತ ವ್ಯವಸ್ಥಾಪಕನಾಗಿ ವ್ಯಾಪಾರ ವಹಿವಾಟು ಉಸ್ತುವಾರಿ ವಹಿಸಿದ್ದು, ಇಂದು ಬೆಳಿಗ್ಗೆ ಕಾಳುಮೆಣಸು ದಾಸ್ತಾನು ಗೋದಾಮು ಅರ್ಧ ತೆರೆದಿರುವದನ್ನು ನೋಡಿದ ಕಾರ್ಮಿಕರು ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಂತೋಷ್‍ಗೆ ಮಾಹಿತಿ ನೀಡಿದರು ಎನ್ನಲಾಗಿದೆ. ಕೂಡಲೇ ಸಂತೋಷ್ ಗೋಣಿಕೊಪ್ಪಲು ಪೆÇಲೀಸರಿಗೆ ದೂರು ನೀಡಿದ್ದು, ಕಳವು ಆರೋಪಿಗಳ ಪತ್ತೆಗೆ ಪೆÇಲೀಸರು ಬಿರುಸಿನ ತನಿಖೆ ಆರಂಭಿಸಿದ್ದಾರೆ.
ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್‍ಪಿ ಕುಮಾರಚಂದ್ರ, ಮಡಿಕೇರಿ ಜಿಲ್ಲಾ ಅಪರಾಧ ಪತ್ತೆ ದಳದ ಪೆÇಲೀಸ್ ಉಪನಿರೀಕ್ಷಕ ಲಿಂಗಪ್ಪ ಮತ್ತು ತಂಡ, ಜಿಲ್ಲಾ ಬೆರಳಚ್ಚು ತಜ್ಞ ಸುರೇಂದ್ರ ಭೇಟಿ ನೀಡಿದ್ದರು. ಬೆಳಿಗ್ಗಿನಿಂದಲೇ ಗೋಣಿಕೊಪ್ಪಲಿನ ನೂತನ ಪೆÇಲೀಸ್ ಉಪನಿರೀಕ್ಷಕ ಗೋವಿಂದರಾಜು ಮತ್ತು ಸಿಬ್ಬಂದಿಗಳು ಆರೋಪಿಗಳ ಸುಳಿವಿಗಾಗಿ ಮಾಹಿತಿ ಕಲೆಹಾಕತೊಡಗಿದರು.
ಗೋದಾಮಿನಲ್ಲಿ ರೂ.6.40ಲಕ್ಷದಷ್ಟು ಮೊತ್ತವನ್ನು ಇರಿಸಿದ್ದು ವ್ಯವಸ್ಥಾಪಕ ಸಂತೋಷ್ ಮಾಡಿರುವ ಪ್ರಮಾದವಾಗಿದ್ದು, ಈ ಬಗ್ಗೆ ಅಪರಾಧ ಪತ್ತೆವಿಭಾಗದ ಲಿಂಗಪ್ಪ ಅವರು ಪ್ರಶ್ನಿಸಿದ್ದು ಗೋದಾಮು ಹಾಗೂ ವ್ಯಾಪಾರ,ವಹಿವಾಟು ಸಂದರ್ಭ ನಿರಂತರ ಸಂಪರ್ಕವಿಟ್ಟುಕೊಂಡಿರುವವರ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ.
ಕಾಕತಾಳೀಯ ಎಂಬಂತೆ ಎಪಿಎಂಸಿ ರಾತ್ರಿ ಕಾವಲು ಸಿಬ್ಬಂದಿ ರಜೆಯ ಮೇಲೆ ತೆರಳಿರುವದು, ಗೇಟ್‍ಗೆ ಎಂದಿನಂತೆ ಬೀಗ ಹಾಕದೆ ಇರುವದು ಇತ್ಯಾದಿ ವಿಚಾರಗಳು ಸ್ಥಳೀಯ ವ್ಯಕ್ತಿಗಳು ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗೋದಾಮಿನಲ್ಲಿ ಕೋಟಿಗಟ್ಟಲೆ ಮೌಲ್ಯದ ಕಾಳು ಮೆಣಸು ದಾಸ್ತಾನಿದ್ದು ಕೇವಲ ಓರ್ವ ವ್ಯಕ್ತಿಯಿಂದ ಕಳವು ಅಸಾಧ್ಯ ಎನ್ನಲಾಗಿದೆ. ಸುಮಾರು 50 ಕೆ.ಜಿ.ಕಾಳುಮೆಣಸಿನ ಒಟ್ಟು 26 ಚೀಲಗಳನ್ನು ವಾಹನದಲ್ಲಿ ಸಾಗಾಟ ಮಾಡಲು ಕನಿಷ್ಟ 5-6 ಮಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಲೋಡಿಂಗ್ ಅನ್ ಲೋಡಿಂಗ್‍ಗೆ ಕಾರ್ಮಿಕರೂ ಕೈಜೋಡಿಸಿರುವ ಸಾಧ್ಯತೆ ಇದ್ದು ತನಿಖಾಧಿಕಾರಿಯಾಗಿ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರನ್ನು ನಿಯೋಜಿಸಿದ್ದು, ಪೆÇಲೀಸ್ ಉಪ ನಿರೀಕ್ಷಕ ಗೋವಿಂದರಾಜು ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳು ಸಹಕರಿಸಲಿದ್ದಾರೆ.
ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಿಂದಲೇ ಭಾರಿ ಕಳವು ನಡೆದಿರುವ ಹಿನ್ನೆಲೆ ಇತರೆ ವರ್ತಕರು ತಮ್ಮ ಕೃಷಿ ಉತ್ಪನ್ನಗಳನ್ನು ದಾಸ್ತಾನಿಡಲು ಭಯ ವ್ಯಕ್ತಪಡಿಸುತ್ತಿರುವದು ಅಲ್ಲಿ ಕಂಡು ಬಂತು.
ವರದಿ:- ಟಿ.ಎಲ್.ಶ್ರೀನಿವಾಸ್, ಎನ್.ಎನ್.ದಿನೇಶ್