ಸೋಮವಾರಪೇಟೆ, ಜೂ.26: ಭಾರೀ ಗಾಳಿ ಮಳೆಗೆ ಬೈನೆ ಮರವೊಂದು ಬಿದ್ದು ವಾಸದ ಮನೆಗೆ ಹಾನಿಯಾಗಿರುವ ಘಟನೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ನಡೆದಿದೆ.

ಜಂಬೂರು ಗ್ರಾಮದ ನಿವಾಸಿ ತಂಗಮಣಿ ಎಂಬವರಿಗೆ ಸೇರಿದ ವಾಸದ ಮನೆಯ ಮೇಲೆ ಬೈನೆ ಮರ ಬಿದ್ದ ಪರಿಣಾಮ ಛಾವಣಿಯ ಶೀಟ್‍ಗಳು ಜಖಂಗೊಂಡಿದ್ದು, ನಷ್ಟ ಸಂಭವಿಸಿದೆ. ಈ ಸಂದರ್ಭ ತಂಗಮಣಿ ಅವರು ಮನೆಯೊಳಗೆ ಇದ್ದರೂ ಸಹ ಅಪಾಯದಿಂದ ಪಾರಾಗಿದ್ದಾರೆ.

ಗ್ರಾಮ ಲೆಕ್ಕಿಗ ಪರಮೇಶ್, ಗ್ರಾಮ ಸಹಾಯಕ ರುದ್ರಕುಮಾರ್ ಅವರುಗಳು ಸ್ಥಳಪರಿಶೀಲನೆ ನಡೆಸಿದ್ದು ಅಂದಾಜು 50 ಸಾವಿರ ನಷ್ಟ ಸಂಭವಿಸಿರುವದಾಗಿ ತಾಲೂಕು ಕಚೇರಿಗೆ ವರದಿ ನೀಡಿದ್ದಾರೆ.