ಮಡಿಕೇರಿ, ಜೂ. 25: ಮಾರಕ ಕಾಯಿಲೆ ಯಾಗಿರುವ ಡೆಂಗಿ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಆತಂಕದ ಪರಿಸ್ಥಿತಿಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಗೆ ಅಗತ್ಯತೆಯಿರುವ ಎಲ್ಲಾ ವ್ಯವಸ್ಥೆ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಅವರು ತಿಳಿಸಿದರು.
‘ಶಕ್ತಿ'ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಅದರಲ್ಲೂ ಕರಿಕೆ ವಿಭಾಗದಲ್ಲಿ ಡೆಂಗಿ ಜ್ವರ ವ್ಯಾಪಿಸುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ತಮ್ಮ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯ ತಂಡ ಕರಿಕೆಯಲ್ಲಿ ಕಾರ್ಯಾಚರಿಸುತ್ತಿದೆ. ಪರಿಸ್ಥಿತಿಯ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಯಿಂದ ಮಾಹಿತಿ ಪಡೆದು ಪರಿಸ್ಥಿತಿ ನಿಯಂತ್ರಣಕ್ಕೆ ಯಾವ ಅಗತ್ಯತೆ ಇದೆ ಎಂದು ಅರಿತು ತಕ್ಷಣ ಅದರ ವ್ಯವಸ್ಥೆ ಮಾಡಲು ತಾವು ಕ್ರಮ ಕೈಗೊಳ್ಳುವದಾಗಿ ಅವರು ಭರವಸೆ ಯಿತ್ತರು. ಔಷಧಿಯ ಕೊರತೆಯಿಲ್ಲ. ಅಗತ್ಯವಿರುವಷ್ಟು ಔಷಧಿಯನ್ನು ಕೂಡ ತಕ್ಷಣವೇ ಒದಗಿಸಿಕೊಡುವದಾಗಿ ಅವರು ಹೇಳಿದರು.
ಆರೋಗ್ಯ ಸಚಿವರಾಗಿ ತಾವು ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿದ್ದು, ಸಾಧ್ಯವಾದಲ್ಲಿ ಕೊಡಗಿಗೆ ಭೇಟಿ ನೀಡಲು ಪ್ರಯತ್ನಿಸುವದಾಗಿಯೂ ಸಚಿವ ರಮೇಶ್ ಕುಮಾರ್ ಹೇಳಿದರು.
ಈ ಬಗ್ಗೆ ‘ಶಕ್ತಿ'ಯೊಂದಿಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಗಂಭೀರತೆಯ ಕುರಿತು ತಾವು ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಸರಕಾರ ಎಲ್ಲಾ ವ್ಯವಸ್ಥೆ ಕಲ್ಪಿಸಲು ಸಿದ್ಧವಿರುವದಾಗಿ ಭರವಸೆ ನೀಡಿದ್ದಾರೆ.
ಮೂವರು ಸಾವಿಗೀಡಾಗಿರುವ ಬಗ್ಗೆ ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ. ಕರಿಕೆಯಲ್ಲಿ ಹೆಲ್ತ್ ಸೆಂಟರ್ ಇಲ್ಲದಿರುವ ಬಗ್ಗೆಯೂ ತಾವು ಗಮನಕ್ಕೆ ತಂದಿದ್ದು, ಈ ಬಗ್ಗೆಯೂ ಸ್ಪಂದಿಸುವ ಭರವಸೆ ನೀಡಿರುವದಾಗಿ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಗಳಿಂದಲೂ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡಿ ರುವದಾಗಿ ವೀಣಾ ತಿಳಿಸಿದರು.