ಮಡಿಕೇರಿ, ಜೂ. 21: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಸದಾ ಚಟುವಟಿಕೆ, ಲವಲವಿಕೆ, ತಾರುಣ್ಯ ಮತ್ತು ಜೀವಿತಾವಧಿಯಲ್ಲಿ ಆರೋಗ್ಯದಿಂದಿರಲು ಯೋಗ ಒಂದು ಬಹುಮುಖ್ಯವಾದ ಮಾರ್ಗವಾಗಿದ್ದು, ನಮ್ಮ ದೇಶದ ಸಂಸ್ಕøತಿಯನ್ನು ಬಿಂಬಿಸುವ ವಿದ್ಯೆ ಇಂದು ವಿಶ್ವವ್ಯಾಪಿಯಾಗಿ ಬೆಳೆದು ನಿಂತಿದೆ. ಇಂದು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಜಿಲ್ಲೆಯ ಹಲವು ಸಂಘ-ಸಂಸ್ಥೆಗಳು ಅಂತರ್ರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿತ್ತು.

ಮಡಿಕೇರಿ ನಗರದಲ್ಲಿಯೂ ಆಯುಷ್ ಮಂತ್ರಾಲಯ, ಆಯುಷ್ ಇಲಾಖೆ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಉಜಿರೆ, ಭಾರತೀಯ ವಿದ್ಯಾಭವನ ಪತಂಜಲಿ ಯೋಗ ಶಿಕ್ಷಣ ಕೇಂದ್ರ, ಅಶ್ವಿನಿ ಆಸ್ಪತ್ರೆ ಮಡಿಕೇರಿ, ನೆಹರೂ ಯುವ ಕೇಂದ್ರ ಹಾಗೂ ಮಡಿಕೇರಿ

ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ನಗರದ ವಿವಿಧೆಡೆಗಳಲ್ಲಿ ಯೋಗ ತರಬೇತಿ ಕೇಂದ್ರಗಳನ್ನು ಹಮ್ಮಿಕೊಳ್ಳಲಾಗಿತ್ತು.

ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಇಂದು ಕೊಡವ ಸಮಾಜದ ಸಭಾಂಗಣದಲ್ಲಿ ಎಲ್ಲಾ ಕೇಂದ್ರಗಳ ಪ್ರಶಿಕ್ಷಣಾರ್ಥಿಗಳಿಂದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಹರೀಶ್ ಬಾಬು ಹಾಗೂ ಡಾ. ಕಾವ್ಯ ಅವರ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಯಿತು. ಸುಮಾರು 45 ನಿಮಿಷಗಳ ಕಾಲ ನಡೆದ ಯೋಗ ಪ್ರದರ್ಶನದಲ್ಲಿ ಚಾಲನಾ ಕ್ರಿಯೆ, ಆಸನಗಳಾದ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಸನ, ಉತ್ತಾನ ಮಂಡುಕಾಸನ, ವಕ್ತಾಸನ, ಮಕರಾಸನ, ಭುಜಂಗಾಸನ, ಶಲಾಭಾಸನ, ಸೇತುಬಂಧಾಸನ, ಬತ್ತಾನ ಪಾದಾಸನ, ಅರ್ಧ ಹಲಾಸನ, ಪವನ ಮುಕ್ತಾಸನ ಹಾಗೂ ಶವಾಸನದ ಪ್ರದರ್ಶನ ನಡೆಯಿತು. ಬಳಿಕ ಪ್ರಾಣಾಯಾಮಗಳಾದ ಕಪಲಾಭಾತಿ, ನಾಡಿಶೋಧನಾ ಪ್ರಾಣಾಯಾಮ, ಶೀತಲೀಪ್ರಾಣಾ ಯಾಮ ಹಾಗೂ ಭ್ರಾಮರಿ ನಂತರ ಧ್ಯಾನ ನಡೆಯಿತು. ಕೊನೆಗೆ ಶಾಂತಿ ಮಂತ್ರದೊಂದಿಗೆ ಯೋಗ ಪ್ರದರ್ಶನವನ್ನು ಮುಕ್ತಾಯಗೊಳಿಸ ಲಾಯಿತು.

ಈ ಸಂದರ್ಭ ಭಾರತೀಯ ವಿದ್ಯಾಭನವದ ಯೋಗ ಕೇಂದ್ರ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಅರುಣ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ ಹಾಗೂ ಇನ್ನಿತರರು ಇದ್ದರು.

ಜಿಲ್ಲಾ ಬಿಜೆಪಿಯಿಂದ ಯೋಗ

ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಬಾಲಭವನದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಬಿಜೆಪಿ ಮಡಿಕೇರಿ ನಗರ ಅಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ಟೌನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗದೀಶ್, ಪ್ರಮುಖರಾದ ಬಿ.ಕೆ. ಅರುಣ್ ಕುಮಾರ್, ಮೋಹನ್ ಮೊಣ್ಣಪ್ಪ, ಧನಂಜಯ ಹಾಗೂ ಇನ್ನಿತರರು ಇದ್ದರು. ಯೋಗ ಶಿಕ್ಷಕ ಗುಡ್ಡೆಮನೆ ರಮೇಶ್ ಅವರು ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.

ಕಾರಾಗೃಹದಲ್ಲಿ ಯೋಗ

ಫೋಟೋ

ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳೊಂದಿಗೆ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ನೆಹರೂ ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಭಾರತೀಯ ವಿದ್ಯಾಭವನದ ಯೋಗ ಕೇಂದ್ರದ ವತಿಯಿಂದ ಕಾರಾಗೃಹದ ಕೈದಿಗಳಿಗೆ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಶಿಕ್ಷಣವನ್ನು ನೀಡಲಾಯಿತು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ, ಕಾರ್ಯದರ್ಶಿ ನವೀನ್ ದೇರಳ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಜಿಲ್ಲಾ ಕಾರಗೃಹದ ಅಧೀಕ್ಷಕ ಮಹದೇವ ನಾಯಕ್ ಹಾಗೂ ಇನ್ನಿತರರು ಇದ್ದರು. ಭಾರತೀಯ ವಿದ್ಯಾಭವನದ ಯೋಗ ಕೇಂದ್ರದ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ಯೋಗ ಶಿಕ್ಷಣ ನೀಡಿದರು.

ವೀರಾಜಪೇಟೆ : ಮನಸ್ಸಿನಲ್ಲಿರುವ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಮೂಡಿಸಲು ಯೋಗಾಭ್ಯಾಸ ಸಹಕಾರಿಯಾಗುತ್ತದೆ ಎಂದು ನಿವೃತ್ತ ಶಿಕ್ಷಕ ಹಾಗೂ ಯೋಗ ಗುರು ಲಕ್ಷ್ಮಿನಾರಾಯಣ್ ಹೇಳಿದರು.

ವಿಜಯವಾಣಿ ಮಾಧ್ಯಮ ಮತ್ತು ಸಂತ ಅನ್ನಮ್ಮ ಕಾಲೇಜು ಇವರ ಸಹಯೋಗದದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ಸಂತ ಅನ್ನಮ್ಮ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಎಲ್ಲಾರಲ್ಲೂ ಯೋಗದ ಬಗ್ಗೆ ಅಜ್ಞಾನ ಹಾಗೂ ತಪ್ಪು ಕಲ್ಪನೆಗಳಿದೆ. ಯೋಗಕ್ಕೂ ಯೋಗಾಭ್ಯಾಸಕ್ಕೂ ವ್ಯತ್ಯಾಸಗಳಿದೆ. ತನ್ನನ್ನು ತಾನು ಅರಿತು ಕೊಳ್ಳುವದೇ ಯೋಗ, ಅದು ಪ್ರದರ್ಶನವಲ್ಲ. ಪತಾಂಜಲಿ ಋಷಿ ಯೋಗದ ಮೂಲ ಪುರುಷರಾಗಿ ದ್ದಾರೆ. ಅಷ್ಟಾಂಗ ಯೋಗ ಅವರ ಕೃತಿಯಾಗಿದೆ. ಯೋಗವನ್ನು ಮಾಡುವ ದರಿಂದ ಬುದ್ಧಿಶಕ್ತಿಯನ್ನು ಸಮಾನವಾಗಿರಿಸಲು ಸಹಕಾರಿ ಯಾಗುತ್ತದೆ. ಯೋಗದ ಒಂದೊಂದು ಅಭ್ಯಾಸಗಳು ಮಾನಸಿಕ ನೆಮ್ಮದಿಯನ್ನು ಸಮತೋಲನದಲ್ಲಿ ಇರಿಸಿ ಅದ್ಭುತ ಗಳನ್ನು ಸಾಧಿಸಲು ಸಹಕಾರಿ ಯಾಗುತ್ತದೆ. ಉಸಿರಾಟ ಕೂಡ ಯೋಗದ ಒಂದು ಅಂಗವಾಗಿದ್ದು, ಮನುಷ್ಯ ಒಂದು ದಿನಕ್ಕೆ 21600 ಬಾರಿ ಉಸಿರಾಡುತ್ತಾರೆ. ಉಸಿರಾಟದಿಂದ ನಮ್ಮ ಜೀವಿತಾವದಿಯನ್ನು ತಿಳಿದುಕೊಳ್ಳಬಹುದಾಗಿದೆ. ನಮ್ಮ ಶರೀರದಲ್ಲಿ 72 ಸಾವಿರ ನಾಡಿಗಳಿದ್ದು 3 ನಾಡಿಗಳು ಬಹು ಮುಖ್ಯವಾಗಿದೆ. ವಜ್ರಾಸನ ಮಾಡುವದರಿಂದ ದೇಹದ ಎಲ್ಲಾ ಕಾಯಿಲೆಗಳನ್ನು ತಡೆಗಟ್ಟಹುದಾಗಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಮಾತನಾಡಿ, ನಿತ್ಯವು ಯೋಗವನ್ನು ಅಭ್ಯಾಸ ಮಾಡುವದರಿಂದ ಶಾರೀರಿಕವಾಗಿ ದೇಹದ ದೃಢÀತೆಯನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಮುಸ್ಲಿಂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ. ಹನೀಫ್ ಮಾತನಾಡಿ, ಇಸ್ಲಾಂ ಧರ್ಮವು ಕೂಡ ಯೋಗವನ್ನು ಪ್ರೋತ್ಸಾಹಿಸುತ್ತದೆ. ಇಸ್ಲಾಂ ಧರ್ಮದಲ್ಲಿ ಬರುವ ಪ್ರಾರ್ಥನೆಗಳ ಹಲವು ಭಂಗಿಗಳು ದೇಹದ ಚಲನವಲನಗಳ ಮೇಲೆ ಪರಿಣಾಮ ಬೀರುವದರಿಂದ ಯೋಗವನ್ನು ಹೋಲುತ್ತದೆ. ಯೋಗದಿಂದ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಫಾ. ಮದುಲೈಮುತ್ತು ಮಾತನಾಡಿ, ಯೋಗದಲ್ಲಿ ದೈಹಿಕ, ಆಧ್ಯಾತ್ಮಿಕ ಹಾಗೂ ಮಾನಸಿಕ ಗುಣಗಳನ್ನು ಹೊಂದಿದೆ. ಪರಿಪೂರ್ಣವಾದ ಆರೋಗ್ಯವನ್ನು ಪಡೆದುಕೊಳ್ಳಲು ಯೋಗವು ಸಹಕಾರಿಯಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿನಿ ಪ್ರಕೃತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಎಸ್. ನಿತಿನ್ ವಂದಿಸಿದರು.

ಸೋಮವಾರಪೇಟೆ: ಶ್ರೀ ರವಿಶಂಕರ್ ಗುರೂಜಿ ಮಾರ್ಗದರ್ಶ ನದ ಆರ್ಟ್ ಆಫ್ ಲಿವಿಂಗ್ ಮತ್ತು ದೊಡ್ಡಮಳ್ತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ದೊಡ್ಡಮಳ್ತೆ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ದಿವಾಕರ್ ಸುಳಿಮಳ್ತೆ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಒತ್ತಡದ ಜೀವನ ಸಾಗಿಸುತ್ತಿರುವವರಿಗೆ ಯೋಗ ಅತ್ಯವಶ್ಯಕ. ನಮ್ಮ ಸಂಸ್ಕøತಿಯ ಭಾಗವಾಗಿರುವ ಯೋಗವನ್ನು ನಾವೆಲ್ಲರೂ ಕಲಿತು, ನಮ್ಮ ಬಿಡುವಿನ ಸಮಯದಲ್ಲಿ ಯೋಗ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದು ಅಭಿಪ್ರಾಯಿಸಿದರು.

ಶಾಲಾ ಮುಖ್ಯ ಶಿಕ್ಷಕ ರೇಣುಕಾಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದ್ದು, ಈಗ ವಿಶ್ವದೆಲ್ಲೆಡೆ ಯೋಗ ಪರಿಚಯವಾಗುತ್ತಿರುವದು ಸಂತೋಷದ ವಿಷಯ ಎಂದು ಅಭಿಪ್ರಾಯಿಸಿದರು. ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕರಾದ ದೀಪಕ್ ಉಪಾಧ್ಯ ಹಾಗೂ ಅಂಜನ್ ಯೋಗ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು. ಮಕ್ಕಳು ಮನೆಯಲ್ಲಿಯೇ ಮಾಡಬಹುದಾದ ದಿನನಿತ್ಯದ ಸರಳ ಯೋಗಾಭ್ಯಾಸದ ಬಗ್ಗೆ ಹೇಳಿಕೊಟ್ಟರು. ಸುಮಾರು 45 ನಿಮಿಷಗಳ ಕಾಲ ವಿದ್ಯಾರ್ಥಿಗಳು ಯೋಗ ಮಾಡಿದರು.

ವೇದಿಕೆಯಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ನೇತ್ರಾವತಿ, ಶಾಲೆಯ ಜಾಗ ದಾನಿಗಳಾದ ಜೋಯಪ್ಪ, ಪಿಡಿಓ ಹೇಮಲತ, ಕಾರ್ಯದರ್ಶಿ ಸುರೇಶ್, ಸಿಆರ್‍ಪಿ ಜವರಯ್ಯ, ಆರ್ಟ್ ಆಫ್ ಲಿವಿಂಗ್‍ನ ಸಂಚಾಲಕರಾದ ರಾಗಿಣಿ, ವಿಜಯ್ ಇದ್ದರು. ವಿದ್ಯಾರ್ಥಿನಿ ಮೌನ ಪ್ರಾರ್ಥಿಸಿ, ಶಿಕ್ಷಕಿಯರಾದ ಜ್ಯೋತಿ ಸ್ವಾಗತಿಸಿ, ಆಶಾ ವಂದಿಸಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸೋಮವಾರ ಪೇಟೆ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜಿನಲ್ಲಿ ಆಚರಿಸಲಾಯಿತು. ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಕೇಂದ್ರದ ವತಿಯಿಂದ ಸ್ಥಳೀಯ ಮಾನಸ ಸಭಾಂಗಣ, ಕಾಫಿ ಮಂಡಳಿ ಕಚೇರಿ, ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡ್ಲಿಪೇಟೆಯ ಮಹಿಳಾ ಸಮಾಜದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕರುಗಳಾದ ದೀಪಕ್ ಉಪಾಧ್ಯ, ಅಂಜನ್, ರಾಗಿಣಿ ಅವರುಗಳು ಯೋಗ ತರಬೇತಿ ನೀಡಿದರು. ಕೌಶಾಲ್ಯಾಭಿವೃದ್ಧಿ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಕುಮ ಜ್ಞಾನವಿಕಾಸ ಕೇಂದ್ರ, ಎಬಿವಿಪಿ ವತಿಯಿಂದ ಮಾನಸ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘಟನೆಗಳ ಪ್ರಮುಖರುಗಳಾದ ಬಿ.ಎಸ್. ಸದಾನಂದ್, ಎನ್.ಎಂ. ದಿವಾಕರ್, ವೈ. ಪ್ರಕಾಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಇಲ್ಲಿನ ನಿರಂತರ ಯೋಗ ತರಬೇತಿ ಕೇಂದ್ರದ ವತಿಯಿಂದ ರೋಟರಿ, ಜೇಸೀ ಸಂಸ್ಥೆ, ಅಕ್ಕನಬಳಗ, ವಿಶ್ವ ಹಿಂದೂ ಪರಿಷತ್, ಜಾಗರಣಾ ವೇದಿಕೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಸ್ಥಳೀಯ ಕೊಡವ ಸಮಾಜದಲ್ಲಿ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಯೋಗ ದಿನಾಚರಣೆ ನಡೆಯಿತು. ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯೋಗವು 11 ಹಿಂದೂ ತತ್ವ ಶಾಸ್ತ್ರಗಳಲ್ಲಿ ಒಂದಾಗಿದ್ದು, ಮುಖ್ಯವಾಗಿ ವ್ಯಕ್ತಿಯನ್ನು ಶಾರೀರಿಕ ಮತ್ತು ಮಾನಸಿಕ ಒತ್ತಡದಿಂದ ಮುಕ್ತಗೊಳಿಸುತ್ತದೆ. ಇಂದ್ರೀಯಗಳನ್ನು ಹತೋಟಿಯಲ್ಲಿಡಲು ಮತ್ತು ಮನಸ್ಸನ್ನು ಪಕ್ವಗೊಳಿಸಲು ಯೋಗವು ನಿರಂತರವಾಗಿ ನಮಗೆ ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಯೋಗವು ವಿಜ್ಞಾನವೂ ಹೌದು ಮತ್ತು ಜೀವನ ಕಲೆಯೂ ಆಗಿದೆ ಎಂದು ಅಭಿಪ್ರಾಯಿಸಿದರು. ಈ ಸಂದರ್ಭ ನಿರಂತರ ಯೋಗ ತರಬೇತಿ ಕೇಂದ್ರದ ವ್ಯವಸ್ಥಾಪಕ ಕಿಬ್ಬೆಟ್ಟ ಗಣೇಶ್, ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ರೋಟರಿ ಸಂಸ್ಥೆಯ ಮೋಹನ್ ರಾಮ್, ವೈದ್ಯರುಗಳಾದ ಜಶ್ವಂತ್, ಶರತ್‍ಬಾಬು ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸಿದ್ದರು.

ಇಲ್ಲಿನ ಪತಂಜಲಿ ಯೋಗ ಕೇಂದ್ರದ ವತಿಯಿಂದ ಪಟ್ಟಣದ ಬೇಳೂರು ರಸ್ತೆಯಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಬೆಳಿಗ್ಗೆ 6.30ರಿಂದ 8ಗಂಟೆಯವರೆಗೆ ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ದಿನಾಚರಣೆಯನು ಆಚರಿಸಲಾಯಿತು. ಗ್ರೇಡ್ 11 ತಹಸೀಲ್ದಾರ್ ನರಗುಂದ, ಲೋಕಾಯುಕ್ತ ಮಾಜಿ ಎಸ್.ಪಿ. ಶಿವಮೂರ್ತಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪತಂಜಲಿ ಕೇಂದ್ರದ ಚಂದ್ರಪ್ಪ ಮಾಸ್ತರ್ ಯೋಗಾಸನವನ್ನು ತಿಳಿಸಿಕೊಟ್ಟರು.