ಪೊನ್ನಂಪೇಟೆ, ಜೂ. 16 : ಅರಣ್ಯ ಇಲಾಖೆಯ ಕಾನೂ&divound;ಂದಾಗಿ ದುಸ್ಥರ ಬದುಕು ಸಾಗಿಸುತ್ತಿರುವ ದ.ಕೊಡಗಿನ ತಟ್ಟೆಕೆರೆ ಗಿರಿಜನ ಹಾಡಿಯ ಹಾಡಿವಾಸಿಗಳ ಬಾಳಿನಲ್ಲಿ ಬೆಳಕು ಕಾಣುವ ದಿನಗಳು ಸಮೀಪಿಸಿ ದಂತೆ ಕಾಣುತ್ತಿದೆ. ಸಮಸ್ಯೆ ಏನೇ ಇದ್ದರೂ ಗಿರಿಜನರ ಬದುಕಿಗೆ ಅಡ್ಡಿಪಡಿಸದೆ ಅವರನ್ನು ಮನುಷ್ಯರಂತೆ ಬದುಕಲು ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಹಲವು ದಶಕಗಳಿಂದ ತಲೆದೋರಿದ್ದ ನಿವೇಶನ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು, ಅರಣ್ಯ, ಐ.ಟಿ.ಡಿ.ಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಬದ್ಧರಾಗಿರುವಂತೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ತಟ್ಟೆಕೆರೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸ ಲಾಯಿತು. ಬಡಾವಣೆ ಮಾದರಿಯಲ್ಲಿ ಮನೆ ನಿರ್ಮಿಸಿ ಹಾಡಿವಾಸಿಗಳಿಗೆ ಹಂಚುವಂತೆಯೂ, ಮನೆಗಳಿಗೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಎಲ್ಲಾ ಪ್ರಯತ್ನ ನಡೆಸುವಂತೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕ ಕೆ.ಜಿ ಬೋಪಯ್ಯ ಅವರು ಬೆಳಿಗ್ಗೆ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯ ಕಲ್ಲಳ್ಳ ವಲಯಕ್ಕೆ ಒಳಪಡುವ ತಟ್ಟೆಕೆರೆ ಹಾಡಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ
ಪರಿಶೀಲಿಸಿ, ಅರಣ್ಯದ ಗೂಗಲ್ ನಕ್ಷೆಯನ್ನು ವೀಕ್ಷಿಸಿದ ಬಳಿಕ ತಟ್ಟೆಕೆರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿಶೇಷ ಸಭೆ ನಡೆಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೀಗ 100 ಕುಟುಂಬದಷ್ಟು ಇರುವ ತಟ್ಟೆಕೆರೆ ಹಾಡಿವಾಸಿಗಳು ನೆಲೆಸಿರುವ ಪ್ರದೇಶ ವಾಸಕ್ಕೆ ಅಯೋಗ್ಯವಾದದ್ದು. ಇಲ್ಲಿನ ಕೆಲವು ಗಿರಿಜನರಿಗೆ ಹಕ್ಕುಪತ್ರ ದೊರೆತಿದ್ದರೂ ಇಲ್ಲಿ ಜೀವಿಸಲು ಯಾರಿಂದಲೂ ಸಾಧ್ಯವಿಲ್ಲ. ಗಿರಿಜನರು ಕೂಡ ಮನುಷ್ಯರಂತೆ ಬದುಕಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವದು ಎಲ್ಲರ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದರು.
ಈ ಹಿಂದೆ ನಾಗರಹೊಳೆಯಲ್ಲಿ ಕಾರ್ಯನಿರ್ವಹಿಸಿದ ಕೊಡಗಿನ ವರಾದ ಎ.ಸಿ.ಎಫ್ ಬೆಳ್ಳಿಯಪ್ಪ ಅವರು ತಟ್ಟೆಕೆರೆ ಹಾಡಿಯ ಗಿರಿಜನರಿಗಾಗಿ ಸಮೀಪದಲ್ಲೆ ತಲಾ ಮೂರುವರೆ ಎಕರೆಯ 2 ಪ್ರದೇಶವನ್ನು ಗುರುತಿಸಿ ಗಿರಿಜನರಿಗಾಗಿ ಮನೆ ನಿರ್ಮಿಸಲು ಅನುಮತಿ ನೀಡುವಂತೆ ಇಲಾಖೆಯ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ. ಈ ಯೋಜನೆ ಜಾರಿಗೊಂಡರೆ ಸಮಸ್ಯೆ ಬಹುತೇಕವಾಗಿ ಬಗೆ ಹರಿಯುತ್ತದೆ. ಆದರಿಂದ ಹಿಂದಿನ ಪ್ರಸ್ತಾವನೆಗೆ ಅಂಗೀಕಾರ ನೀಡುವಂತೆ ಎ.ಸಿ.ಎಫ್ ಮೇಲಧಿಕಾರಿಗಳ ಗಮನ ಸೆಳೆಯಬೇಕು ಎಂದು ಸಭೆಯಲ್ಲಿ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಡನ್ನು ಉಳಿಸಿಕೊಂಡು ಬಂದಿರುವ ಗಿರಿಜನರ ಬದುಕಿಗಾಗಿ 7 ಎಕ್ರೆ ಜಾಗ ನೀಡಿದರೆ 643 ಚ.ಕೀ ವ್ಯಾಪ್ತಿಯಲ್ಲಿ ಆವರಿಸಿರುವ ನಾಗರಹೊಳೆ ಅಭಯಾರಣ್ಯ ಏನನ್ನು ಕಳೆದುಕೊಳ್ಳುವದಿಲ್ಲ ಎಂದು ಹೇಳಿದರು.
ಉದ್ದೇಶಿತ ಒಟ್ಟು 7 ಏಕ್ರೆ ಪ್ರದೇಶದ ಎರಡು ಪ್ರದೇಶಗಳನ್ನು ಬಡಾವಣೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಎಲ್ಲಾ ಹಾಡಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಬಳಿಕ ಸಂಬಂಧಿಸಿದ ಇಲಾಖೆ ನಿವೇಶನ ಹಂಚಿ ವಾಸಕ್ಕೆ ಯೋಗ್ಯವಾದ ಮನೆಗಳನ್ನು ನಿರ್ಮಿಸಬೇಕು. ಹೀಗಾದಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಹಾಡಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಲಭ ವಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಹಾಡಿ ವಾಸಿಗಳು ಈ ಯೋಜನೆಗೆ ಸಹಕಾರ ನೀಡಬೇಕು. ಹಾಡಿ ಪ್ರದೇಶದಲ್ಲಿ ಬೇರೆ ಬೇರೆ ಜಾಗದಲ್ಲಿ ಮನೆ ನಿರ್ಮಿಸಿ ಹರಿದು ಹಂಚಿಹೋಗುವದು ಬೇಡ ಎಂದು ಮನವಿ ಮಾಡಿದರು. ಅರಣ್ಯ ಇಲಾಖೆ ಕೂಡ ಈ ಪ್ರದೇಶವನ್ನು ಹೊರತುಪಡಿಸಿ ಟ್ರಂಚ್ ನಿರ್ಮಿಸ ಬೇಕು. ಗಿರಿಜನರಿಗೆ ಅನಗತ್ಯ ಕಿರುಕುಳ ನೀಡಬಾರದು ಎಂದು ಇದೇ ಸಂದರ್ಭ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ ಇದೀಗ ಮಳೆಗಾಲ ಆರಂಭವಾಗಿರುವದರಿಂದ ಗಿರಿಜನ ಹಾಡಿಗಳಿಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸಲು ಟಾರ್ಪಲ್ ವಿತರಿಸುವಂತೆಯೂ ಹಾಡಿವಾಸಿಗಳಿಗೆ ಹಕ್ಕುಪತ್ರ ನೀಡಲು ಇಲ್ಲಸಲ್ಲದ ನೆಪವೊಡ್ಡಿ ವಿಳಂಬ ಧೋರಣೆ ಅನುಸರಿಸದಂತೆ ಸಭೆಯಲ್ಲಿದ್ದ ಜಿಲ್ಲಾ ಐ.ಟಿ.ಡಿ.ಪಿ ಅಧಿಕಾರಿ ಸತೀಶ್ ಅವರಿಗೆ ಸ್ಪಷ್ಟ ಸೂಚನೆ ನೀಡಿದರು.
ತಟ್ಟೆಕೆರೆ ಗಿರಿಜನರ ಹಾಡಿಗೆ ತೆರಳುವ ರಸ್ತೆ ಅಭಿವೃದ್ಧಿಗಾಗಿ ಐ.ಟಿ.ಡಿ.ಪಿ ಇಲಾಖೆ ವತಿಯಿಂದ ರೂ. 10 ಲಕ್ಷ ಅನುದಾನ ಮಂಜೂರಾ ಗಿದೆ. ಆದರೆ ರಸ್ತೆ ಬದಿಯ ತೋಟದ ಮಾಲೀಕರು ಜಾಗ ತೆರವುಗೊಳಿಸದ ಕಾರಣ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ. ರಸ್ತೆ ಅಭಿವೃದ್ಧಿಗೊಳ್ಳದಿದ್ದರೆ ಹಾಡಿಯ ಅಭಿವೃದ್ಧಿ ಆಗುವದಿಲ್ಲ. ರಸ್ತೆಯ ಕೊರತೆಯಿಂದ ಗುತ್ತಿಗೆದಾರರು ಮುಂದೆ ಬರುವದಿಲ್ಲ. ತೋಟ ಮಾಲೀಕರ ಮನವೊಲಿಸಿ ಜಾಗ ಬಿಡಿಸಿ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಇದರ ಜವಾಬ್ದಾರಿಯನ್ನು ಗ್ರಾ.ಪಂ ಮತ್ತು ಗ್ರಾಮದ ಪ್ರಮುಖರೇ ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ಗ್ರಾ.ಪಂ. ಅಧ್ಯಕ್ಷರಿಗೆ ಸಲಹೆ ನೀಡಿದರು. ಈ ಮೂಲಕ ತಟ್ಟೆಕೆರೆ ಹಾಡಿಯನ್ನು ದೇಶದಲ್ಲೆ ಮಾದರಿ ಗಿರಿಜನ ಬಡಾವಣೆಯನ್ನಾಗಿ ರೂಪಿಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಪರಿಸರ ಉಳಿಸುವ ನಾಟಕ ವಾಡುವ ಸಾಕಷ್ಟು ಮಂದಿ ಪರಿಸರವಾದಿಗಳ ಮುಖವಾಡ ಧರಿಸಿ ನಾಟಕವಾಡುವವರಿದ್ದಾರೆ. ಇಂತಹವರ ಬಗ್ಗೆ ಗಿರಿಜನರು ಎಚ್ಚರಿಕೆಯಿಂದಿರಬೇಕು. ಇವರು ಮಧ್ಯೆ ಪ್ರವೇಶಿಸಿ ಗಿರಿಜನರ ಬದುಕಿಗೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ನಾಟಕಕಾರರ ನುಸುಳುವಿಕೆಗೆ ಗಿರಿಜನರು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ನೆರೆದಿದ್ದ ಗಿರಿಜನರಲ್ಲಿ ವಿನಂತಿ ಮಾಡಿದರು.
ಸಭೆಯಲ್ಲಿದ್ದ ನಾಗರಹೊಳೆ ಎ.ಸಿ.ಎಫ್ ಪ್ರಸನ್ನ ಪಟ್ಗಾರ್ ಮಾತನಾಡಿ, ತಟ್ಟೆಕೆರೆ ಹಾಡಿಗೆ ಸಂಬಂಧಿಸಿದಂತೆ ಹಿಂದಿನ ಎ.ಸಿ.ಎಫ್ ಇಲಾಖೆಗೆ ಸಲ್ಲಿಸಿದ ಪ್ರಸ್ತಾಪಕ್ಕೆ ತಾವು ಬದ್ಧರಾಗಿದ್ದು, ಹಾಡಿಗೆ ಶಾಶ್ವತ ಪರಿಹಾರ ಕಲ್ಪಿಸಲು ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಹೇಳಿದರು. ಕಾಡಿನ ರಕ್ಷಣೆಯಲ್ಲಿ ಗಿರಿಜನರ ಪಾತ್ರ ಮಹತ್ವದ್ದಾಗಿದ್ದು, ಅವರು ಸಮಾಜದ ಮುಖ್ಯವಾಹಿನಿಗೆ ಸೇರಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ಪ್ರಸ್ತಾಪಕ್ಕೆ ಇಲಾಖೆಯ ಅಂಗೀಕಾರ ದೊರೆಯಲು ಅಗತ್ಯ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ತಟ್ಟೆಕೆರೆ ಹಾಡಿಯ ಗಿರಿಜನ ಮುಖಂಡ ಕೆಂಪ ಮಾತನಾಡಿ, ಗಿರಿಜನರ ಋಣವನ್ನು ತೀರಿಸಲು ಅರಣ್ಯ ಇಲಾಖೆಗೆ ಸಾಧ್ಯವಿಲ್ಲ. ಆದರೆ ತಲೆಮಾರುಗಳಿಂದ ಇಲಾಖೆ ನಮ್ಮನ್ನು ಬಳಸಿಕೊಳ್ಳುತ್ತಿದ್ದರೂ ನಮ್ಮನ್ನು ಶತ್ರುಗಳಂತೆ ಕಾಣುತ್ತಿರುವದು ಸಹಿಸಲು ಸಾಧ್ಯವಿಲ್ಲ. ನಮ್ಮನ್ನು ಮನುಷ್ಯರಂತೆ ಬದುಕಲು ಬಿಡಬೇಕು. ಗಿರಿಜನರು ಕೂಡ ಪ್ರಜಾಪ್ರಭುತ್ವ ಭಾರತದ ಪ್ರಜೆಗಳೆ ಎಂದು ಇಲಾಖೆ ತಿಳಿಯಬೇಕು. ಅರಣ್ಯ ಇಲಾಖೆಯ ಗಿರಿಜನ ವಿರೋಧಿ ಧೋರಣೆಯಿಂದಾಗಿ ನಮ್ಮ ಮುಂದಿನ ಪೀಳಿಗೆಗೆ ನೆಲೆ ಇಲ್ಲ ದಂತಾಗುತ್ತದೆ. ಮಹಾತ್ಮ ಗಾಂಧೀ ಮತ್ತು ಡಾ. ಅಂಬೇಡ್ಕರ್ ಅವರ ಆಶಯಕ್ಕೆ ಅರಣ್ಯ ಇಲಾಖೆ ಬದ್ಧರಾಗ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗರಹೊಳೆಯ ಗಿರಿಜನ ಮುಖಂಡ ಜೆ.ಕೆ ತಿಮ್ಮ ಮಾತನಾಡಿ, ಗಿರಿಜನರ ಹಕ್ಕು ಸರಿಯಾಗಿ ದೊರೆತರೆ ಮಾತ್ರ ನಮಗೆ ಸ್ವಾತಂತ್ರ್ಯ ಬಂದಂತಾಗುತ್ತದೆ. ಮನೆ, ಶಿಕ್ಷಣ, ಶುದ್ಧ ನೀರು, ರಸ್ತೆಯನ್ನಷ್ಟೇ ಗಿರಿಜನರು ಕೇಳುತ್ತಿದ್ದಾರೆ. ಇದು ಸಮರ್ಪಕವಾಗಿ ದೊರೆತರೆ ಅದೇ ಸಾಕು ಎಂದು ಹೇಳಿದರು. ತಾ.ಪಂ. ಮಾಜಿ ಸದಸ್ಯ ಜೆ.ಕೆ ರಾಮು ಮಾತನಾಡಿ, ಗಿರಿಜನರಿಗೆ ಹಕ್ಕು ಪತ್ರ ನೀಡಿದರೆ ಅರಣ್ಯ ನಾಶವಾಗುವ ಆತಂಕ ಯಾರಿಗೂ ಬೇಡ. ಅರಣ್ಯ ನಾಶದ ನೆಪದಲ್ಲಿ ಗಿರಿಜನರ ಹಕ್ಕನ್ನು ಕಸಿಯಬೇಡಿ. ಅರಣ್ಯ ಹಕ್ಕು ಕಾಯ್ದೆಯನ್ನು ಬದ್ಧತೆ ಮತ್ತು ಇಚ್ಛಾಶಕ್ತಿಯೊಂದಿಗೆ ಜಾರಿಗೊಳಿಸಿದರೆ ಅದೇ ದೊಡ್ಡದು ಎಂದು ಹೇಳಿದರು.
ಸಭೆಯಲ್ಲಿ ನಿಟ್ಟೂರು ಗ್ರಾ.ಪಂ. ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ಬಿ.ಜೆ.ಪಿ ಪ್ರಮುಖ ಮಾಚಂಗಡ ಸುಜಾ ಪೂಣಚ್ಚ ಗಿರಿಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೋರಂಗಡ ಪವನ್, ಕಲ್ಲಳ್ಳ ವಲಯ ಅರಣ್ಯಾಧಿಕಾರಿ ಶಿವರಾಮ್, ತಾಲೂಕು ಐ.ಟಿ.ಡಿ.ಪಿ ಅಧಿಕಾರಿ ಚಂದ್ರಶೇಖರ್, ಗೋಣಿಕೊಪ್ಪಲು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ವೀರಾಜಪೇಟೆ ಫೆಡರೇಶನ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ಬಿ.ಜೆ.ಪಿ ಪ್ರಮುಖರಾದ ಚೆಪ್ಪುಡಿರ ದಿನು, ಮಾಚಂಗಡ ಉಮೇಶ್ ಮುತ್ತಣ್ಣ, ಪೋಡಮಾಡ ಸುಕೇಶ್ ಸೇರಿದಂತೆ ತಟ್ಟೆಕೆರೆ ಹಾಡಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಿಟ್ಟೂರು ಗ್ರಾ.ಪಂ. ಪಿ.ಡಿ.ಓ. ಹೆಚ್.ಎಸ್ ಹರೀಶ್ ಸ್ವಾಗತಿಸಿದರು. ಸುಜಾ ಪೂಣಚ್ಚ ವಂದಿಸಿದರು. -ರಫೀಕ್ ತೂಚಮಕೇರಿ, ಎನ್.ಎನ್. ದಿನೇಶ್