ಮಡಿಕೇರಿ, ಜೂ. 20: ಜಿಲ್ಲೆಯ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹಿಸಿ ಶೇಕಡವಾರು ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಮಡಿಕೇರಿ ನಗರಸಭೆ, ವೀರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಉದ್ದಿಮೆ ಪರವಾನಗಿ, ಕುಡಿಯುವ ನೀರಿನ ತೆರಿಗೆ, ಜಾಹೀರಾತು ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ ಮತ್ತಿತರ ತೆರಿಗೆ ವಸೂಲಾತಿಯಲ್ಲಿ ಬಹಳ ಹಿಂದೆ ಉಳಿದಿದ್ದು, ತೆರಿಗೆ ಸಂಗ್ರಹ ಮಾಡುವ ನಿಟ್ಟಿನಲ್ಲಿ ಆಯಾಯ ವ್ಯಾಪ್ತಿಯ ಸಿಬ್ಬಂದಿಗಳು ತಂಡೋಪಾದಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದರು.

ತೆರಿಗೆ ಸಂಗ್ರಹದಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಜುಲೈ, 15 ರೊಳಗೆ ಬಾಕಿ ಇರುವ ತೆರಿಗೆಯನ್ನು ವಸೂಲಿ ಮಾಡಲು ಮುಂದಾಗಬೇಕು. ತೆರಿಗೆ ಸಂಗ್ರಹದಲ್ಲಿ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಕಂಪ್ಯೂಟರೀಕರಣ ಮಾಡಬೇಕು. ಜೊತೆಗೆ ಆನ್‍ಲೈನ್ ಮೂಲಕ ತೆರಿಗೆ ಸಂಗ್ರಹಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು. ಕಂಪ್ಯೂಟರೀಕರಣ ಮಾಡುವದರಿಂದ ಯಾರೆಲ್ಲಾ ತೆರಿಗೆ ಪಾವತಿಸಿದ್ದಾರೆ. ತೆರಿಗೆ ಕಟ್ಟದಿರುವವರು ಯಾರೂ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಹಾಗೆಯೇ ಜಿಲ್ಲೆಯ ನಗರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಎಷ್ಟು ಮಂದಿ ತೆರಿಗೆದಾರರು ಇದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವದು, ನಗರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಗಬೇಕಿರುವ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವದು. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮುಂದಾಗುವಂತೆ ಸೂಚನೆ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಹೋಂ ಸ್ಟೇಗಳು ಎಷ್ಟಿವೆ ಎಂಬ ಬಗ್ಗೆ ಕೂಡಲೇ ಮಾಹಿತಿ ಒದಗಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. 13ನೇ ಹಣಕಾಸು ಯೋಜನೆ ಅನುಷ್ಠಾನ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ಅವರು ಜಿಲ್ಲೆಯ ನಗರಾಭಿವೃದ್ಧಿ ಸಂಬಂಧಿಸಿದಂತೆ ಕುಡಿಯುವ ನೀರಿನ ತೆರಿಗೆ ಸಂಗ್ರಹ, ಉದ್ದಿಮೆ ಪರವಾನಗಿ, ಜಾಹೀರಾತು ತೆರಿಗೆ, ವಾಣಿಜ್ಯ ಮಳಿಗೆ, ಆಸ್ತಿ ತೆರಿಗೆ ಮತ್ತಿತರ ಸಂಬಂಧ ಅವರು ಮಾಹಿತಿ ನೀಡಿದರು. ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ನಿರ್ದೇಶನ ನೀಡಿದರು.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ವತಿಯಿಂದ ನಗರ ನಿವೇಶನ ಮತ್ತು ವಾಜಪೇಯಿ ವಸತಿ ಯೋಜನೆಯ ಪ್ರಗತಿ, ಬೀದಿ ದೀಪ ನಿರ್ವಹಣೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರಿ ಜಾಗ ಒತ್ತುವರಿ, ಘನ ತ್ಯಾಜ್ಯ ವಸ್ತು ನಿರ್ವಹಣೆ, ಬೀದಿ ವ್ಯಾಪಾರಿಗಳ ಸಮೀಕ್ಷೆ ಮತ್ತು ಗುರುತಿನ ಬೀಟಿ ವಿತರಿಸಿದ ಬಗ್ಗೆ ಪ್ರಗತಿ ವಿವರ ಮತ್ತಿತರ ಬಗ್ಗೆ ಹಲವು ಮಾಹಿತಿ ಪ್ರಸ್ತಾಪಿಸಿದರು. ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಹೋಂ ಸ್ಟೇಗಳ ಸಮೀಕ್ಷೆ ನಡೆಯುತ್ತಿದ್ದು, ಒಂದು ವಾರದಲ್ಲಿ ವರದಿ ನೀಡಲಾಗುವದು ಎಂದು ತಿಳಿಸಿದರು.

ಪೌರಾಡಳಿತ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಕಾಶ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಂ.ರವಿಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಕೃಷ್ಣ ಪ್ರಸಾದ್, ಕಿರಿಯ ಎಂಜಿನಿಯರ್ ಶಿವಕುಮಾರ್ ಮತ್ತಿತರರು ಹಲವು ಮಾಹಿತಿ ನೀಡಿದರು.

ಮಡಿಕೇರಿ ನಗರಸಭೆ ತೆರಿಗೆ ಸಂಗ್ರಹದ ಪ್ರಗತಿ ವಿವರ ಇಂತಿದೆ. ಉದ್ದಿಮೆ ಪರವಾನಗಿಯಲ್ಲಿ ಶೇ.7.82 ರಷ್ಟು ಸಾಧನೆ, ನೀರಿನ ಕರ ವಸೂಲಿಯಲ್ಲಿ ಶೇ.5.86 ರಷ್ಟು ಸಾಧನೆ, ಜಾಹೀರಾತು ತೆರಿಗೆಯಲ್ಲಿ 2.14 ಸಾಧನೆ, ಆಸ್ತಿ ತೆರಿಗೆಯಲ್ಲಿ ಶೇ. 62.59 ರಷ್ಟು ಸಾಧನೆ, ವಾಣಿಜ್ಯ ಮಳಿಗೆ ಬಾಡಿಗೆ ವಸೂಲಾತಿಯಲ್ಲಿ ಶೇ.14.23 ರಷ್ಟು ಸಾಧನೆ.