ಮಡಿಕೇರಿ, ಜೂ. 10: ಇತ್ತೀಚಿನ ಕೆಲವು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ದೇವಟ್ ಪರಂಬುವಿನದ್ದೇ ಚರ್ಚೆಯ ವಿಷಯವಾಗಿದೆ. ಟಿಪ್ಪು ಜಯಂತಿ ವಿಚಾರದಿಂದ ದೇವಟ್ ಪರಂಬು ಗಂಭೀರತೆ ಪಡೆದಿದೆ. ದೇವಟ್ ಪರಂಬುವಿನಲ್ಲಿ ಟಿಪ್ಪುವಿನಿಂದ ಹತ್ಯೆಗೀಡಾದವರ ಗೌರವಾರ್ಥವೆಂಬಂತೆ ಸಿ.ಎನ್.ಸಿ.ಯಿಂದ ಸ್ಮಾರಕ ನಿರ್ಮಾಣ... ಇದಾದ ಹಲವು ಸಮಯದ ಬಳಿಕ ಈ ಸ್ಮಾರಕ ಧ್ವಂಸಗೊಳಿಸಿರುವದು ಇದೀಗ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣವಾಗುತ್ತಿದೆ. ಸ್ಮಾರಕ ಸ್ಥಾಪನೆಯ ಪರ - ವಿರುದ್ಧದ ನಿಲುವು ವರ್ಗ ಸಂಘರ್ಷಕ್ಕೂ ಎಡೆಯಾಗುತ್ತಿರುವ ಗಂಭೀರ ಸನ್ನಿವೇಶ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಪರಿಸ್ಥಿತಿ ಈ ಮಟ್ಟಕ್ಕೆ ಮುಂದುವರಿದಿದ್ದರೂ ಜಿಲ್ಲೆಯನ್ನಾಳಿದ..., ಆಳುತ್ತಿರುವ ರಾಜಕೀಯ ಪ್ರಮುಖರು, ಪಕ್ಷಗಳು ತುಟಿಕ್ - ಪಿಟಿಕ್ ಎನ್ನುತ್ತಿಲ್ಲ. ಈ ಹಿನ್ನೆಲೆಯಲ್ಲಿ ‘ಶಕ್ತಿ’ ರಾಜಕೀಯ ಪ್ರಮುಖರು, ಪಕ್ಷ ಪ್ರಮುಖರ ಅಭಿಪ್ರಾಯ ಕ್ರೋಢೀಕರಿಸುವ ಪ್ರಯತ್ನ ಮಾಡಿದೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವು ಪ್ರಮುಖರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ದೊರೆತಿರುವ ಪ್ರತಿಕ್ರಿಯೆ - ಅಭಿಪ್ರಾಯಗಳು ಇಂತಿವೆ.

ಪ್ರತಿಕ್ರಿಯೆ ಇಲ್ಲ : ಯಂ.ಸಿ.ಎನ್.

ದೇವಟ್ ಪರಂಬು ಬೆಳವಣಿಗೆಯ ಕುರಿತು ಸದ್ಯಕ್ಕೆ ತಾವು ಯಾವದೇ ಪ್ರತಿಕ್ರಿಯೆ ನೀಡಲಾರೆ ಎಂದರು ಮಾಜಿ ಸಚಿವ ಯಂ.ಸಿ. ನಾಣಯ್ಯ.

ಸದ್ಯಕ್ಕೆ ಮಾತನಾಡಲಾರೆ : ಬೋಪಯ್ಯ

ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ತಾವು ಏನೂ ಮಾತನಾಡುವದಿಲ್ಲ. ಹೀಗೆಂದವರು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ.

ಎರಡು ಸಮುದಾಯದೊಂದಿಗೆ ಚರ್ಚೆ : ರಂಜನ್

ಸದ್ಯಕ್ಕೆ ತಾವು ಬೆಂಗಳೂರಿನಲ್ಲಿದ್ದು, ಅಲ್ಲಿಂದ ಬಂದ ನಂತರ ಎರಡು ಸಮುದಾಯದವರನ್ನು ಸೇರಿಸಿ ಚರ್ಚಿಸಲಾಗುವದು. ಆನಂತರ ಒಂದು ತೀರ್ಮಾನಕ್ಕೆ ಬರಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್

ಹೇಳಿದರು.

ಒಮ್ಮತಕ್ಕೆ ಬರಲಾಗುವದು : ಸುನಿಲ್

ಸಂಬಂಧಿಸಿದ ಸಮುದಾಯದವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ಒಮ್ಮತಕ್ಕೆ ಬರುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ತಿಳಿಸಿದರು.

ಸದ್ಯಕ್ಕೆ ಎಲ್ಲರೂ ಸುಮ್ಮನಿರಲಿ : ಅರುಣ್

ಸದ್ಯದ ಮಟ್ಟಿಗೆ ಹೇಳಿಕೆ - ಪ್ರತಿ ಹೇಳಿಕೆ, ಪ್ರತಿಭಟನೆ ಮರು ಪ್ರತಿಭಟನೆಗಳನ್ನು ಎಲ್ಲಾ ಸಂಘಟನೆಗಳು ನಿಲ್ಲಿಸಲಿ, ರಾಜಕೀಯ ಪಕ್ಷದವರಾಗಲಿ, ಸಂಘಟನೆಗಳ ಪ್ರಮುಖರಾಗಲಿ ಯಾವದೇ ಹೇಳಿಕೆಗಳನ್ನು ನೀಡದೆ ಸುಮ್ಮನಿದ್ದರೆ ಸಾಕು. ಮಾಧ್ಯಮದ ಮೂಲಕ ಸಮರ ಸಾರುವ ಬದಲು ಇದನ್ನು ನಿಲ್ಲಿಸಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸೌಹಾರ್ದತೆ ಮೂಡಲಿ : ಸುಜಾ

ಎರಡು ಸಮುದಾಯದವರು ಒಂದೆಡೆ ಕುಳಿತು ವಿಚಾರವನ್ನು ಇತ್ಯರ್ಥಪಡಿಸಿಕೊಳ್ಳಬೇಕಿದೆ. ಶಾಸಕರೂ ಸೇರಿದಂತೆ ಸಮುದಾಯದವರು ಸೇರಿ ಸೌಹಾರ್ದತೆಯಿಂದ ಇದು ಬಗೆ ಹರಿಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಪಿ. ಸುಜಾ ಕುಶಾಲಪ್ಪ ಪ್ರತಿಕ್ರಿಯಿಸಿದರು.

ಸೋಮವಾರ ಪ್ರತಿಕ್ರಿಯೆ : ಟಿ.ಪಿ. ರಮೇಶ್

ದೇವಟ್ ಪರಂಬು ಕುರಿತಂತೆ ಸೋಮವಾರದಂದು ಕಾಂಗ್ರೆಸ್ ಪಕ್ಷದ ನಿಲುವನ್ನು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಲಾಗುವದು ಎಂಬದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರ ಪ್ರತಿಕ್ರಿಯೆ.

ಗೌರವ ಇರಲಿ : ಸೌಹಾರ್ದತೆ ಮೂಡಲಿ : ಸಂಕೇತ್

ಕೊಡಗಿನಲ್ಲಿ ಪೂರ್ವಿಕರು ಶಾಂತಿಯ ಜೀವನ ನಡೆಸಿಕೊಂಡು ಬಂದಿದ್ದಾರೆ. ಇತಿಹಾಸದ ಬಗ್ಗೆ ಗೌರವ ಇರಬೇಕು. ಪ್ರಸ್ತುತ ಅನಗತ್ಯ ಚರ್ಚೆಯ ಬದಲು ಸೌಹಾರ್ದತೆಯ ಬದುಕಿನತ್ತ ಚಿಂತನೆ ಮಾಡಬೇಕಿದೆ ಎಂದು ಜೆಡಿಎಸ್‍ನ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಅನಿಸಿಕೆ ವ್ಯಕ್ತಪಡಿಸಿದರು.

ಸರಕಾರದೊಂದಿಗೆ ಚರ್ಚೆ : ಸುಮಾವಸಂತ್

ಜಾತಿ - ಜಾತಿಗಳ ನಡುವೆ ವೈಮನಸ್ಸು ಮೂಡುತ್ತಿರುವದು ಬೇಸರದ ಸಂಗತಿ. ಈ ಬಗ್ಗೆ ಎಲ್ಲರನ್ನೂ ಕರೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸರಕಾರದ ಗಮನ ಸೆಳೆಯಲಾಗುವದು ಎಂದು ಮಾಜಿ ಸಚಿವೆ ಸುಮಾವಸಂತ್ ಹೇಳಿದರು.

ಚಿಲ್ಲರೆ ಜಗಳ ಬೇಡ : ಚಂದ್ರಕಲಾ

ಯಾವದೋ ಕಾಲದ ವಿಚಾರವನ್ನು ತಂದು ಎಲ್ಲರೂ ಕಿತ್ತಾಡುವದು ಬೇಡ. ಇದು ಚಿಲ್ಲರೆ ಜಗಳದಂತಾಗಿದೆ. ಕೊಡಗಿನ ಜನ ವಿಚಾರವಂತರು ಎಂಬ ಹೆಸರಿದೆ. 21ನೇ ಶತಮಾನದಲ್ಲಿ ಈ ಬೆಳವಣಿಗೆ ಸರಿಯಲ್ಲ. ಅಭಿವೃದ್ಧಿಗೆ ಎಲ್ಲರೂ ಒತ್ತು ನೀಡಬೇಕಿದೆ. ಟಿಪ್ಪುವಿನಿಂದ ಕೊಡವ ಜನಾಂಗದವರು ಮಾತ್ರ ಹತ್ಯೆಗೀಡಾಗಿದ್ದಾರೆ ಎಂಬ ವಾದವನ್ನು ಒಪ್ಪಲಾಗದು ಎಂದು ಜಿ.ಪಂ. ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಕೆ.ಪಿ. ಚಂದ್ರಕಲಾ ಹೇಳಿದರು.

ಜನಾಂಗೀಯ ವೈಷಮ್ಯ ಬೇಡ : ಮೇದಪ್ಪ

ಕೊಡಗಿನಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಿಕೊಂಡು ಬಂದಿದ್ದು, ಇಲ್ಲಿ ಜನಾಂಗೀಯ ವೈಷಮ್ಯ ಇರಲಿಲ್ಲ. ಈ ಹಿಂದಿನಂತೆ ಮುಂದೆಯೂ ಸಾಮರಸ್ಯದಿಂದ ಬದುಕಬೇಕಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಪ್ರತಿಕ್ರಿಯಿಸಿದರು.

ಸಂಪರ್ಕಕ್ಕೆ ಸಿಗದ ಹಾಲಿ - ಮಾಜಿ ಸಂಸದರು

ದೇವಟ್ ಪರಂಬು ವಿಚಾರದ ಕುರಿತು ಪ್ರತಿಕ್ರಿಯೆಗಾಗಿ ‘ಶಕ್ತಿ’ ಹಾಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಂಸದ ಅಡಗೂರು ಎಚ್. ವಿಶ್ವನಾಥ್ ಅವರುಗಳ ಮೊಬೈಲ್ ಸಂಖ್ಯೆಯನ್ನು ಸಾಕಷ್ಟು ಬಾರಿ ಡಯಲ್ ಮಾಡಿದರೂ, ಇಬ್ಬರೂ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಮತ್ತೋರ್ವ ಮಾಜಿ ಸಚಿವ ಟಿ. ಜಾನ್ ಅವರನ್ನು ಸಂಪರ್ಕಿಸಲಾಯಿತಾದರೂ, ತಾವು ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದು, ಈ ಬಗ್ಗೆ ನಂತರ ಪ್ರತಿಕ್ರಿಯಿಸುವದಾಗಿ ಹೇಳಿದರು.