ಸುಂಟಿಕೊಪ್ಪ, ಜೂ. 7: ಕೃಷಿ ಪ್ರಧಾನ ಭಾರತ ದೇಶದಲ್ಲಿ ಕೃಷಿಯೇ ಮೂಲಾಧಾರ. ರೈತರು ಉನ್ನತ ಮಟ್ಟದ ಕೃಷಿ ತಂತ್ರಜ್ಞಾನವನ್ನು ಬಳಸಿ ಆರ್ಥಿಕವಾಗಿ ಮುಂದೆ ಬರಲು ಸರಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ಕೃಷಿ ಇಲಾಖೆಯ ಸುಂಟಿಕೊಪ್ಪ ಹೋಬಳಿ ಆಶ್ರಯದಲ್ಲಿ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಸರಕಾರದಿಂದ ಯಂತ್ರೋಪಕರಣ ಖರೀದಿ ಸೇರಿದಂತೆ ಅನೇಕ ಸೌಲಭ್ಯಗಳು ರಿಯಾಯಿತಿ ದರದಲ್ಲಿ ಸಿಗುತ್ತಿದೆ. ಅದರ ಸದುಪಯೋಗ ಆಗಬೇಕು ಎಂದರು. ಕೃಷಿ ಅಭಿಯಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಅವರು, ಸರಕಾರದಿಂದ ರೈತರಿಗೆ ಕೃಷಿ ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮವನ್ನು ರೈತರ ಮಾಹಿತಿಗಾಗಿ ಆಯೋಜಿಸಲಾಗಿದೆ. ಜಿ.ಪಂ. ವತಿಯಿಂದ ರೈತರಿಗೆ ಉಚಿತ ಟಾರ್ಪಲ್ ನೀಡಲಾಗುತ್ತಿದೆ ಎಂದರು.
ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಕೊಡಗಿನಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಭತ್ತ, ಪ್ರದಾನ ಬೆಳೆಯಾಗಿದೆ. ಜಿಲ್ಲೆಯ ಜನತೆ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಮಾಡಿ ಮಾರಾಟ ಮಾಡುವ ಪ್ರಕ್ರಿಯೆಗೆ ಇತಿಶ್ರೀ ಹಾಡದಿದ್ದಲ್ಲಿ ಕೊಡಗು ಕೊಡಗಾಗಿ ಉಳಿಯುವದಿಲ್ಲ. ಯಾವದೇ ಕಾರಣಕ್ಕೂ ಕೊಡಗಿನ ಬೆಳೆಗಾರರು, ರೈತರು ಭೂಮಿಯನ್ನು ಮಾರಾಟ ಮಾಡುವದಾಗಲಿ, ಗುತ್ತಿಗೆ ಕೊಡುವದಾಗಲಿ ಸರಿಯಲ್ಲ. ಇದರಿಂದ ಮುಂದಿನ ಪೀಳಿಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜ ಶೇಖರ್ ಕಾಫಿ, ಕರಿಮೆಣಸುಗಳಿಗೆ ರೋಗಬಾಧೆ ಬಂದರೆ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಕೃಷಿ ಉಪ ನಿರ್ದೇಶಕ ಡಾ. ಕೆ. ರಾಜು, ತಾ.ಪಂ. ಸದಸ್ಯರಾದ ವಿಮಲಾವತಿ, ಮಣಿ, ಸೋಮವಾರಪೇಟೆ ತಾಲೂಕು ಕೃಷಿ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಸುಂಟಿ ಕೊಪ್ಪ ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ಕ್ಲೈವ್ ಪೊನ್ನಪ್ಪ, ಕೃಷಿ ವಿಜ್ಞಾನಿ ಗಳಾದ ಡಾ. ವೀರೇಂದ್ರ ಕುಮಾರ್, ಡಾ. ವೆಂಕಟರಮಣಪ್ಪ, ಡಾ. ಸ್ವಾತಿ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಸ್ವಾಗತಿಸಿದರು.