ಕುಶಾಲನಗರ, ಮೇ 12: ಕುಶಾಲನಗರ ಸಮೀಪ ನಂಜರಾಯಪಟ್ಟಣ, ಗುಡ್ಡಹೊಸೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಮರವೊಂದು ಮನೆ ಮೇಲೆ ಮುರಿದು ಬಿದ್ದ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಯಾವದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಮನೆಗೆ ಮರ ಬಿದ್ದ ಕಾರಣ ಮನೆ ಸಂಪೂರ್ಣ ಜಖಂಗೊಂಡು ಹಾನಿ ಉಂಟಾಗಿದೆ. ಸಂಜೆ ವೇಳೆ ಮಳೆ ಬಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ನಂಜರಾಯಪಟ್ಟಣ ಸರಕಾರಿ ಆಸ್ಪತ್ರೆ ಬಳಿಯ ಸುಶೀಲ ಅಂಥೋಣಿ ಎಂಬ ಮಹಿಳೆಗೆ ಸೇರಿದ ಮನೆ ಮೇಲೆ ಪಾನವಾಳ ಮರ ಬಿದ್ದಿದ್ದು ಮನೆಯ ಛಾವಣಿ ಕುಸಿದಿದೆ. ಸ್ಥಳಕ್ಕೆ ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯೆ ವಿಜು ಚಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಸುಮೇಶ್ ಮತ್ತು ಗ್ರಾಮಸ್ಥರು ಆಗಮಿಸಿ ಮರವನ್ನು ತೆರವುಗೊಳಿಸುವಲ್ಲಿ ಸಹಕರಿಸಿದರು.