ವೀರಾಜಪೇಟೆ, ಜೂ. 16: ಮಧುಮೇಹಿ ಚಿಕಿತ್ಸೆಯ ಹೊಸ ವಿಧಾನವನ್ನು ಅನುಸರಿಸಿ ಸಿಹಿ ಪದಾರ್ಥಗಳನ್ನು ಹಾಗೂ ಎಲ್ಲಾ ವಿಧದ ಆಹಾರ ಪದಾರ್ಥಗಳನ್ನು ಸೇವಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದಾದ ಹೊಸ ವಿಧಾನವನ್ನು ನುರಿತ ವೈದ್ಯ ಡಾ: ಎಂ.ವಿ.ಪ್ರಸಾದ್ ಪರಿಚಯಿಸಲಿದ್ದಾರೆ ಎಂದು ಅಮ್ಮತ್ತಿಯ ಮಂಡೇಪಂಡ ಸರಸ್ವತಿ ಮುತ್ತಣ್ಣ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸರಸ್ವತಿ ಅವರು ಕೇರಳದ ವಯನಾಡು ಜಿಲ್ಲೆಯ ಕೇಣಿಚ್ಚಿರ ಎಂಬಲ್ಲಿನ ವೃಂದಾವನ ಮೆಡಿಕಲ್ ರಿಸರ್ಚ್ ಚಾರಿಟೇಬಲ್ ಟ್ರಸ್ಟ್‍ನ ತಜ್ಞ ವೈದ್ಯ ಡಾ: ಎಂ.ವಿ.ಪ್ರಸಾದ್ ಆಹಾರ ಉಪಯೋಗಿಸುವ ವಿಧಾನ, ಹಾಗೂ ಮಧುಮೇಹ ನಿಯಂತ್ರಣಕ್ಕೆ ಲಘು ವ್ಯಾಯಾಮದ ಅರಿವು ಮೂಡಿಸುವ ವಿಧಾನದ ಮಾಹಿತಿ ಒದಗಿಸಲಿದ್ದಾರೆ. ಇದರಿಂದ ರಕ್ತದ ಒತ್ತಡ(ಬಿ.ಪಿ.) ಕೊಲೆಸ್ಟ್ರಾಲ್‍ಗೂ ಉಪಯುಕ್ತವಾಗಲಿದೆ ಎಂದರು.

ತಾ. 18ರಂದು ಅಮ್ಮತ್ತಿಯ ಗುಡ್ ಶೆಫರ್ಡ್ ಕಾನ್ವೆಂಟ್ ಸಭಾಂಗಣದಲ್ಲಿ ನಡೆಯಲಿದ್ದು ಬೆಳಿಗ್ಗೆ 9ಗಂಟೆಗೆ ಶಿಬಿರದ ನೋಂದಣಿ ಕಾರ್ಯ ಆರಂಭವಾಗಲಿದೆ. ಈಗಾಗಲೇ ಕೊಡಗಿನ ಅನೇಕ ಕಡೆಗಳಲ್ಲಿ ಶಿಬಿರಗಳು ನಡೆದಿವೆ ಎಂದು ತಿಳಿಸಿದರು.