ಸೋಮವಾರಪೇಟೆ, ಮೇ 13: ಇಲ್ಲಿನ ವಿರಕ್ತ ಮಠದ ಆಶ್ರಯದಲ್ಲಿ ದಿ. ಗುರುಸಿದ್ದ ಮಹಾಸ್ವಾಮಿಗಳ 29ನೇ ಪುಣ್ಯ ಸಂಸ್ಮರÀಣೋತ್ಸವ ಕಾರ್ಯಕ್ರಮ ತಾ. 15 ರಂದು (ನಾಳೆ) ನಡೆಯಲಿದೆ ಎಂದು ಮಠಾಧಿಪತಿ ಶ್ರೀ ವಿಶ್ವೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗೈಕ್ಯ ಗುರುಗಳ ಗದ್ದುಗೆಗೆ ತಾ. 15 ರಂದು ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಸಹಸ್ರನಾಮ ಪೂಜೆ, ರಾಜೋಪಚಾರ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. 7 ಗಂಟೆಗೆ ಷಟುಷ್ಥಲ ಧ್ವಜಾರೋಹಣವನ್ನು ರಾವಂದೂರು ಮುರುಘಾ ಮಠದ ಮೋಕ್ಷಪತಿ ಮಹಾ ಸ್ವಾಮೀಜಿ ನೆರವೇರಿಸಲಿರುವರು ಎಂದರು.

ಸಭಾ ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲೂಕು ಹೊಸಳ್ಳಿ ಮತ್ತು ನಾಗ್ತಿಹಳ್ಳಿ ಗ್ರಾಮದ ಬಸವಲಿಂಗ ಶಿವಯೋಗಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ 2015ರಲ್ಲಿ ಶ್ರೀ ಮಠದಲ್ಲಿ ಜರುಗಿದ ಶಿವಾನುಭವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವದು. 2015-16ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವದು ಎಂದರು.

ಶ್ರೀ ಮಠದ ಶಿವಾನುಭವ ಗೋಷ್ಠಿ ಸಮ್ಮೇಳನ ಬೆಳಿಗ್ಗೆ 10.30ಕ್ಕೆ ಪ್ರಾರಂಭಗೊಳ್ಳುವದು. ವೀರಾಜಪೇಟೆ ವಿರಕ್ತಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಮ್ಮುಖದಲ್ಲಿ, ದಿವ್ಯ ಸಾನ್ನಿಧ್ಯವನ್ನು ದಾವಣಗೆರೆ ಹೆಬ್ಬಾಳಿನ ರುದ್ರೇಶ್ವರ ವಿರಕ್ತ ಮಠದ ಶ್ರೀ ಮಹಾಂತೇಶ ರುದ್ರೇಶ್ವರ ಮಹಾ ಸ್ವಾಮಿಗಳು ವಹಿಸಲಿರುವರು.