ಸಿದ್ದಾಪುರ, ಜೂ. 21: ಸಿದ್ದಾಪುರ ಸಮೀಪದ ದಿಡ್ಡಳ್ಳಿ ಹಾಡಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಜೇನುಕುರುಬ ಕುಟುಂಬಗಳು ನಿವೇಶನಕ್ಕಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಒತ್ತಾಯಿಸಿದ್ದಾರೆ

ಚನ್ನಯ್ಯನಕೊಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ದಿಡ್ಡಳ್ಳಿ ಹಾಡಿಯಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಾಗಿ ಇತ್ತೀಚೆಗೆ ಹೊಟ್ಟೆಪಾಡಿಗಾಗಿ ವಿವಿಧ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆಂದು ತೆರಳಿ ಇದೀಗ ಮತ್ತೆ ಹಾಡಿಗೆ ಬಂದು 8 ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ನೆಲೆಸಿದ್ದಾರೆ. ಇನ್ನೂ 33 ಕುಟುಂಬಗಳು ಕಾಫಿ ತೋಟಗಳಲ್ಲಿ ನಿವೇಶನ ರಹಿತರಾಗಿ ನೆಲೆಸಿದ್ದು, ಎಲ್ಲಾ ಕುಟುಂಬಕ್ಕೂ ನಿವೇಶನ ನೀಡಬೇಕೆಂದು ಗಿರಿಜನ ಮುಖಂಡ ಜೆ.ಕೆ. ಅಪ್ಪಾಜಿ ಒತ್ತಾಯಿಸಿದ್ದಾರೆ

ಜೆ.ಕೆ. ಮುತ್ತಮ್ಮ ಮಾತನಾಡಿ, ಸರಕಾರಗಳು ಬುಡಕಟ್ಟು ಜನಾಂಗವನ್ನು ಕಡೆಗಣಿಸುತ್ತಿದ್ದು, ಹಾಡಿಗಳಲ್ಲಿ ಯಾವದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಕಳೆದ 70 ವರ್ಷಗಳಿಂದ ನೆಲೆಸಿರುವ ಆದಿವಾಸಿಗಳು ಮೂಲ ಸೌಕರ್ಯಕ್ಕಾಗಿ ಇಂದಿಗೂ ಹೋರಾಟ ಮಾಡುತ್ತಿದ್ದಾರೆ

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಎಲ್ಲಾ ಸೌಲಭ್ಯಗ ಳೊಂದಿಗೆ ನಿವೇಶನ ಹಾಗೂ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದ್ದು, ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಿ ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಎಚ್ಚರಿಸಿದ್ದಾರೆ.

ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಧಿಕಾರಿ ಗೋಪಾಲ್ ಭೇಟಿ ನೀಡಿ ಅರಣ್ಯದಲ್ಲಿ ನಿರ್ಮಿಸಿರುವ ಗುಡಿಸಲು ತೆರವುಗೊಳಿಸುವಂತೆ ಹೇಳಿದ ಸಂದರ್ಭ; ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ನಿವಾಸಿಗಳು ಯಾವದೇ ಕಾರಣಕ್ಕೂ ಇಲ್ಲಿಂದ ತೆರಳುವದಿಲ್ಲ ಎಂದು ಪಟ್ಟು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದರು

ಅರಣಣ್ಯಾಧಿಕಾರಿ ಗೋಪಾಲ್ ಪತ್ರಿಕೆಯೊಂದಿಗೆ ಮಾತನಾಡಿ ತಿತಿಮತಿ ದೇವಮಚ್ಚಿ ರಕ್ಷಿತಾ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಯಾರು ಹೊಸದಾಗಿ ಗುಡಿಸಲು ಕಟ್ಟುವಂತ್ತಿಲ್ಲ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಂಡು ತೆರವು ಗೊಳಿಸಲಾಗುವದು ಎಂದು ಹೇಳಿದರು ಧರಣಿ ಸತ್ಯಾಗ್ರಹದಲ್ಲಿ ಗ್ರಾ. ಪಂ. ಸದಸ್ಯೆ ಕಾವೇರಿ ಸೇರಿದಂತೆ 20ಕ್ಕೊ ಹೆಚ್ಚು ಮಂದಿ ಆದಿವಾಸಿಗಳು ಇದ್ದರು.