ಕುಶಾಲನಗರ, ಜೂ. 9: ನೈಸರ್ಗಿಕವಾಗಿ ಕಂಡುಬರುವ ಯಾವದೇ ಸಂಪನ್ಮೂಲಗಳನ್ನು ಪೋಲಾಗದಂತೆ ಎಚ್ಚರ ವಹಿಸುವದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದರು. ಅವರು ಅರಣ್ಯ ಮತ್ತು ಪರಿಸರ, ಜೀವಿಶಾಸ್ತ್ರ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ನಡೆದ ವಿಶ್ವ ಜೀವ ವೈವಿಧ್ಯ ದಿನಾಚರಣೆ ಮತ್ತು ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲಗಳ ಬಗ್ಗೆ ತಿಳುವಳಿಕೆಯನ್ನು ಪ್ರತಿಯೊಬ್ಬರೂ ಹೊಂದುವದರೊಂದಿಗೆ ಆ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ದಿನನಿತ್ಯದ ಅವಶ್ಯಕತೆಗಳ ಬಗ್ಗೆ ಚರ್ಚಿಸುವದರೊಂದಿಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು. ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಪರಿಸರದ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವದು ಅತ್ಯಗತ್ಯವಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಈಗಾಗಲೆ ‘ಲಕ್ಷವೃಕ್ಷ’ ಯೋಜನೆಗೆ ಚಾಲನೆ ದೊರೆತಿದ್ದು, ಈ ಸಾಲಿನಲ್ಲಿ ನದಿ ತಟಗಳಲ್ಲಿ 1.5 ಲಕ್ಷ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಯೋಜಿಸಿದೆ ಎಂದ ಏಡುಕೊಂಡಲು ಅವರು, ಜಿಲ್ಲೆಯ ಸ್ವಯಂ ಸೇವಾ ಸಂಘಗಳೊಂದಿಗೆ ಕೈಜೋಡಿಸುವ ಮೂಲಕ ಈ ಯೋಜನೆ ಯಶಸ್ವಿಯಾಗಲಿದೆ ಎಂದು ಮಾಹಿತಿ ಒದಗಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಪರಿಸರ ಶಿಕ್ಷಣ ಕೇಂದ್ರದ ಮುಖ್ಯಸ್ಥ ಸಂತೋಷ್ ಆರ್. ಸುತಾರ್ ಮಾತನಾಡಿ, ಶಾಲಾ ಮಟ್ಟದಲ್ಲಿ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಿಂದ ಪೋಷಕರಿಗೆ ಹಾಗೂ ಪೋಷಕರ ಮೂಲಕ ಸಮಾಜದ ಎಲ್ಲಾ ರಂಗಗಳಿಗೆ ಪರಿಸರದ ಬಗ್ಗೆ ಅರಿವು ಜಾಗೃತಿ ಮೂಡಿಸುವದು ಇಂದಿನ ಆದ್ಯ ಕರ್ತವ್ಯವಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪರ್ಯಾಯ ಇಂಧನ ಮೂಲಗಳನ್ನು ಹೆಚ್ಚಾಗಿ ಬಳಸಿಕೊಳ್ಳುವದರೊಂದಿಗೆ ಕಾಡಿನ ಜೀವ ಸಂಕುಲ ಮತ್ತು ನದಿಗಳ ಸಂರಕ್ಷಣೆಯ ಚಿಂತನೆ ಹರಿಸಬೇಕಾಗಿದೆ ಎಂದರು.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಪರಿಸರ ಸಂರಕ್ಷಣೆ ಬಗ್ಗೆ ಸಂವಾದ ನಡೆಸಿದರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೆಸ್ವಾಮಿ, ಕಾರ್ಯಕ್ರಮಾಧಿಕಾರಿ ಕೆ.ಎಸ್. ಮಂಜುನಾಥ್, ತರಬೇತುದಾರರಾದ ನತಾಶ ಬಲ್ಲಾಳ್, ಕೆ.ಎಸ್. ಪೂಜಾ, ಲಕ್ಷ್ಮಿಕಾಂತ್, ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಇದ್ದರು.
ಕರಾವಿಪ ರಾಜ್ಯ ಸಂಚಾಲಕ ಟಿ.ಜಿ. ಪ್ರೇಮ್‍ಕುಮಾರ್ ಪ್ರಾಸ್ತಾವಿಕ ನುಡಿಗಳಾಡಿದರು. ಶಿಕ್ಷಕ ಟಿ.ಬಿ. ಮಂಜುನಾಥ್ ನಿರೂಪಿಸಿದರು, ಶಿಕ್ಷಣ ಸಂಯೋಜಕ ಕೆ. ಮೂರ್ತಿ ವಂದಿಸಿದರು. ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳು ವಿವಿಧ ಚಟುವಟಿಕೆಗಳ ಮೂಲಕ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.