ಮಡಿಕೇರಿ, ಜೂ. 24: ಮೇಲ್ನೋಟಕ್ಕೆ ದರೋಡೆ ಪ್ರಕರಣದ ಚಿತ್ರಣ ಬರುವಂತೆ ನಟಿಸಿ, ಪತ್ನಿಯನ್ನೇ ಕೊಲ್ಲಿಸಲು ಯತ್ನಿಸಿದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಚರರನ್ನು ಕೊಡಗು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಕೊಲೆಯತ್ನ ಜೂನ್ 18ರ ರಾತ್ರಿ ಹೆಬ್ಬಾಲೆ ಬಳಿ ನಡೆದಿದ್ದು, ಸಾಯದೆ ಉಳಿದ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪಾತ್ರ ಬೆಳಕಿಗೆ ಬರುತ್ತದೆಂದು ಭಯಬಿದ್ದ ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಇಂದು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.ಹೆಬ್ಬಾಲೆಯಲ್ಲಿ ನಡೆದ ದರೋಡೆ ಮತ್ತು ಕೊಲೆ ಯತ್ನ ಇದೀಗ “ಸುಪಾರಿ ಸ್ಕೆಚ್” ಎಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನಗಳು ಹಾಗೂ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಕುಶಾಲನಗರ ಠಾಣಾಧಿಕಾರಿ ಜೆ.ಇ.ಮಹೇಶ್ ನೇತೃತ್ವದ ತಂಡ ಅರಕಲಗೋಡು ತಾಲ್ಲೂಕಿನ ಬಸವನಹಳ್ಳಿ ಗ್ರಾಮದವನಾದ, ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಿರುವ ಕಿರಣ್ ಕುಮಾರ್(26), ಪಿರಿಯಾಪಟ್ಟಣದ ಕೊಪ್ಪದವನಾದ, ಬೆಂಗಳೂರು ಸುಂಕದಕಟ್ಟೆಯಲ್ಲಿ ವಾಸವಿರುವ ಜಗದೀಶ್(36), ಕುಶಾಲನಗರದ ನಿವಾಸಿ ಗಿರೀಶ ಯಾನೆ ಗಿರಿ ಗೌಡ(25), ಪಿರಿಯಾಪಟ್ಟಣದ ಕಂಪಲಾಪುರದ ಕೆ.ಎಂ. ಹರೀಶ್(32), ಪಿರಿಯಾಪಟ್ಟಣದ ನಿಲುವಾಡಿ ಗ್ರಾಮದ ಎನ್.ಆರ್. ಯೋಗೇಶ್ ಮತ್ತು ಪಿರಿಯಾಪಟ್ಟಣದ ರಾವಂದೂರು ಗ್ರಾಮದ ಜಯಲಕ್ಷ್ಮಿ (50) ಎಂಬವರನ್ನು ಬಂಧಿಸಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಕುಶಾಲನಗರದ ಗುಮ್ಮನಕೊಲ್ಲಿಯ ಮಹೇಂದ್ರ (35) ಆತ್ಮಹತ್ಯೆಗೆ ಶರಣಾಗಿದ್ದು, ಬಂಧಿತ ವ್ಯಕ್ತಿಗಳ ವಿಚಾರಣೆÉಯಿಂದ ಮಹೇಂದ್ರ ತನ್ನ ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ಎನ್ನುವ ಆಘಾತಕಾರಿ ಸತ್ಯ ಬಯಲಾಗಿದೆ.

ಗುಮ್ಮನಕೊಲ್ಲಿ ನಿವಾಸಿಯಾದ ವರ್ತಕ ಮಹೇಂದ್ರ , ಅವರ ಪತ್ನಿ ಆಶಾ ಮತ್ತು ಹರೀಶ್ ಎಂಬವರು ಜೂ.18 ರಂದು ಶನಿವಾರಸಂತೆಗೆ ವ್ಯಾಪಾರಕ್ಕೆಂದು ತೆರಳಿ, ರಾತ್ರಿ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಹಿಂದಿರುಗುತ್ತಿದ್ದರು. ರಾತ್ರಿ 8.30ರ ಸುಮಾರಿಗೆ ಹೆಬ್ಬಾಲೆಯ ಬಳಿ ವಾಹನದ ಟಯರ್ ಗಾಳಿ ಹೋಗಿದೆಯೆಂದು ಬೇಕೆಂದೇ ವಾಹನವನ್ನು ನಿಲ್ಲಿಸಲಾಗಿತ್ತು.

ಇದೇ ಹಂತದಲ್ಲಿ ಅಲ್ಲಿಗೆ ಬಂದ ಕಿರಣ್ ಕುಮಾರ್ ಮತ್ತು ಮತ್ತೊಬ್ಬಾತ ಮಹೇಂದ್ರ ಮತ್ತು ಹರೀಶ್ ಅವರ ಮುಖಕ್ಕೆ ಖಾರದ ಪುಡಿ ಎರಚಿದಂತೆ ವರ್ತಿಸಿ ವಾಹನದಲ್ಲಿ ಕುಳಿತಿದ್ದ ಆಶಾರವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚೈನ್ ಮತ್ತು ತಾಳಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಪತಿ ಆತ್ಮಹತ್ಯೆಗೆ ಶರಣು

ಘÀಟನೆ ಬಗ್ಗೆ ಆಶಾ ನೀಡಿದ ದೂರಿನ ಮೇರೆ ಪೊಲೀಸರು ತನಿಖಾ ಕಾರ್ಯವನ್ನು ಕೈಗೊಂಡು, ಜೂ.19 ರಂದು ಮಹೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಜಾಗತೋರಿಸುವಂತೆ ಸೂಚಿಸಿದ್ದರು. ಈ ಸಂದರ್ಭ ಸಮ್ಮತಿ ವ್ಯಕ್ತಪಡಿಸಿದ್ದ ಮಹೇಂದ್ರ ಬಳಿಕ ವಿಷ ಸೇವಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಈತನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಕೊನೆಯುಸಿರೆಳೆದ.

ಪಲಾಯನಕ್ಕೆ ಮುಂದಾದ ಆರೋಪಿಗಳು

ವಿಶೇಷ ತನಿಖಾ ತಂಡ ಈ ಬಗ್ಗೆ ತನಿಖೆ ನಡೆಸಿದಾಗ, ದುಷ್ಕøತ್ಯವೆಸಗಿದ ಆರೋಪಿಗಳು ಬೆಂಗಳೂರಿನಿಂದ ತಮಿಳುನಾಡಿಗೆ ಪಲಾಯನ ಮಾಡಲು ಮುಂದಾಗಿರುವ ಮಾಹಿತಿಯರಿತು, ಇದೇ ಜೂ.23 ರಂದು ಬೆಂಗಳೂರಿನಲ್ಲಿ ಕಿರಣ್ ಕುಮಾರ್‍ನ್ನು ಬಂಧಿಸುವದರೊಂದಿಗೆ ಕೊಲೆಯ ರಹಸ್ಯ ಅನಾವರಣಗೊಂಡಿದ್ದು, ಮಹೇಂದ್ರ ತನ್ನ ಪತ್ನಿ ಆಶಾ ಅವರ ಹತ್ಯೆಗೋಸ್ಕರ ಮಹೇಂದ್ರ ಅವರ ಚಿಕ್ಕಮ್ಮನ ಮಗ ಕಿರಣ್ ಕುಮಾರ್‍ಗೆ 2 ಲಕ್ಷ ರೂ.ಗಳ ಸುಪಾರಿ ನೀಡಿದ್ದು ತಿಳಿದು ಬಂದಿರುವದಾಗಿ ಹೇಳಿದರು.

ಪ್ರಕರಣದ ಪ್ರಮುಖ ಆರೋಪಿ, ಮೃತ ಮಹೇಂದ್ರ ಇದೇ ಜೂ.15 ರಂದು ಕಿರಣ್ ಕುಮಾರ್, ಜಗದೀಶ್ ಹಾಗೂ ಗಿರೀಶ್‍ಗೆ ಪತ್ನಿಯ ಹತ್ಯೆಗೆ ಸಂಚು ರೂಪಿಸಿ, ಸುಪಾರಿ ನೀಡಿದ್ದ. ಈ ಸಂಚಿನ ಭಾಗವಾಗಿ ಜೂ.18 ರಂದು ಬೆಂಗಳೂರಿನಿಂದ ಚಾಲಕ ನಂದ ಅವರೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಕಿರಣ್ ಕುಮಾರ್, ಆತನ ಪತ್ನಿಯ ಅಕ್ಕನ ಗಂಡ ಜಗದೀಶ್, ಗಿರೀಶ ಯಾನೆ ಗಿರಿಗೌಡ ಅವರೊಂದಿಗೆ ಶನಿವಾರಸಂತೆಗೆ ಆಗಮಿಸಿ ವ್ಯಾಪಾರದಲ್ಲಿ ನಿರತನಾಗಿದ್ದ ಮಹೇಂದ್ರ ಮತ್ತು ಹರೀಶ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅದರ ಭಾಗವಾಗಿ ಸಂಜೆ ಮಹೀಂದ್ರ ತಡವಾಗಿ ಪತ್ನಿ ಆಶಾ ಮತ್ತು ಹರೀಶರೊಂದಿಗೆ ವಾಹನದಲ್ಲಿ ಹಿಂದಿರುಗುತ್ತಿದ್ದಾಗ. ಹೆಬ್ಬಾಲೆ ಬಳಿ ವಾಹನ ನಿಲ್ಲಿಸಿದ್ದರು. ಈ ಸಂದರ್ಭ ಸಮಯ ಸಾಧಿಸಿ ಕಿರಣ್ ಕುಮಾರ್ ಮತ್ತು ಜಗದೀಶ್ ಅವರು ಮಹೇಂದ್ರ ಮತ್ತು ಹರೀಶ್‍ರಿಗೆ ಖಾರದ ಪುಡಿ ಎರಚಿದಂತೆ ನಾಟಕವಾಡಿ, ಆಶಾಳ ಮೇಲೆ ಹಲ್ಲೆ ನಡೆಸಿ ಹತ್ಯೆಗೈಯ್ಯಲು ಪ್ರಯತ್ನಿಸಿದ ಸಂದರ್ಭ ಯಾವದೋ ವಾಹನ ಬರುತ್ತಿದ್ದುದನ್ನು ಗಮನಿಸಿ, ಚಿನ್ನದ ಚೈನನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದರು.

ಆಶಾರವರ ಕುತ್ತಿಗೆಯಿಂದ ಸೆಳೆÉದುಕೊಂಡಿದ್ದ ಚಿನ್ನದ ಚೈನನ್ನು ಕಿರಣ್ ಕುಮಾರ್ ಅತ್ತೆ ರಾವಂದೂರಿನಲ್ಲಿರುವ ಜಯಲಕ್ಷ್ಮಿ ಎಂಬವರಿಗೆ ಕಿರಣ್ ಕುಮಾರ್ ಮತ್ತು ಜಗದೀಶ್ ಅವರು ನೀಡಿದ್ದರು. ಅದನ್ನು ಜಯಲಕ್ಷ್ಮಿ ಮತ್ತು ಕಿರಣ್ ಕುಮಾರ್ ಪತ್ನಿ ರಂಜಿತ ಅಡವಿಟ್ಟು 55 ಸಾವಿರ ಹಣವನ್ನು ನೀಡಿದ್ದರು. ಇದರಲ್ಲಿ 5 ಸಾವಿರವನ್ನು ಜಯಲಕ್ಷ್ಮಿ ಹಾಗೂ 5 ಸಾವಿರ ರೂ.ಗಳನ್ನು ಕಿರಣ್ ಕುಮಾರ್ ಮತ್ತು ಜಗದೀಶ್ ಪಡೆದುಕೊಂಡಿದ್ದು, ಉಳಿದ 45 ಸಾವಿರ ರೂ.ಗಳನ್ನು ರಂಜಿತಾಳಿಗೆ ನೀಡಲಾಗಿತ್ತು. ಇದೀಗ ರಂಜಿತ ಹಾಗೂ ಚಾಲಕ ನಂದ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಂಡಿರುವದಾಗಿ ಎಸ್‍ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಜೆ.ಇ. ಮಹೇಶ್, ಸಿಬ್ಬಂದಿಗಳಾದ ಜಗದೀಶ್, ಜಯಪ್ರಕಾಶ್, ಸುದೀಶ್, ಲೋಕೇಶ್, ನಾಗರಾಜು, ರಮೇಶ್, ಆಶಾ, ಚಾಲಕ ರಾಜು, ಕುಶಾಲನಗರ ಪಟ್ಟಣ ಠಾಣೆಯ ಉದಯ ಕುಮಾರ್, ಲೋಕೆÉೀಶ್, ಟಿ.ಎಸ್. ಸುದೀಶ್ ಕುಮಾರ್, ರಾಜೇಶ್ ಹಾಗೂ ಗಿರೀಶ್ ಅವರುಗಳಿಗೆ 10 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ ಎಂದು ಎಸ್‍ಪಿ ಹೇಳಿದರು.

ಪತಿ ಮಹೇಂದ್ರ ಸಾವಿನಿಂದಾಗಿ ಪತ್ನಿಯ ಕೊಲೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆಶಾಳಿಗೆ ಚೂರಿಯಿಂದ ತಿವಿದ ಕಿರಣನ ಪ್ರಕಾರ ‘ಪತ್ನಿ ನಿತ್ಯ ಕಿರಿಕಿರಿ ಮಾಡುತ್ತಾಳೆ, ಜಗಳ ಮಾಡುತ್ತಾಳೆ, ಹಾಗಾಗಿ ಆಕೆಯನ್ನು ಮುಗಿಸಲು ಸುಪಾರಿ ನೀಡುತ್ತಿದ್ದೇನೆ’ ಎಂದು ಮಹೇಂದ್ರ ಹೇಳಿದ್ದನಂತೆ. ಆದರೆ, ಇದ್ಯಾವದರ ಪರಿವೆಯಿಲ್ಲದ ಆಶಾ ಘಟನೆಯಿಂದಾದ ಗಾಬರಿಯಿಂದ ಇನ್ನೂ ಹೊರಬಂದಿಲ್ಲ.