ಕುಶಾಲನಗರ, ಜೂ.26 : ಕುಶಾಲನಗರ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ವರದಿ ಮಾಡಲು ತೆರಳಿದ ಪರ್ತಕರ್ತರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಜಕರಿಯ ಸೇರಿದಂತೆ ಮೂವರ ಮೇಲೆ ಮೊಕದ್ದಮೆ ದಾಖಲಿಸಿ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಶಾಲನಗರ ಪಟ್ಟಣವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್‍ಗಳಲ್ಲಿ (ಕೆ.ಎ.-46-ಟಿ.3486 , ಕೆ.ಎ.-12-ಎ.7096) ಅಕ್ರಮವಾಗಿ ಕೊಪ್ಪ ಕಡೆಯಿಂದ ಕುಶಾಲನಗರ ಪಟ್ಟಣ ಕಡೆಗೆ ಮರಳುಸಾಗಾಟ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಪತ್ರಕರ್ತರಾದ ಹೆಚ್.ಎಂ ರಘು ಎಂಬವರು ಮರಳು ತುಂಬಿದ ವಾಹನದ ಫೋಟೋ ತೆಗೆಯುತ್ತಿದ್ದ ವೇಳೆ ಜಕರಿಯಾ ಎಂಬಾತ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಒಡ್ಡಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧÀ ಕುಶಾಲನಗರ ಟೌನ್ ಪೊಲೀಸರು ಮೂರು ಮಂದಿ ಮೇಲೆ ಮೊಕದ್ದಮೆ ದಾಖಲಿಸಿ ಎರಡು ಟ್ರಾಕ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಳೆಯ ಪರವಾನಿಗೆ ಪತ್ರದ ನಕಲಿ ಪ್ರಿಂಟ್ ಮಾಡಿ ದಾಖಲೆ ಸೃಷ್ಟಿಸಿ ಮರಳು ಸಾಗಾಟ ಮಾಡುತ್ತಿರುವ ಸಂಶಯದ ಹಿನ್ನೆಲೆಯಲ್ಲಿ ದಾಖಲೆಗಳನ್ನು ವಶಪಡಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.