ಕುಶಾಲನಗರ, ಜೂ. 23: ಕೊಡಗು ಜಿಲ್ಲೆಯ ಪರಿಸರ ಸಮತೋಲನ ಕಾಪಾಡದಿದ್ದಲ್ಲಿ ದಕ್ಷಿಣ ಭಾರತದ ಜನ-ಜಾನುವಾರುಗಳು ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಎದುರಿಸುವ ಸಾಧ್ಯತೆ ಇದೆ ಎಂದು ಕಾವೇರಿ ಬಚಾವೋ ಆಂದೋಲನದ ಪ್ರಮುಖರು ಹಾಗೂ ಅಖಿಲ ಭಾರತ ಸನ್ಯಾಸಿ ಸಂಘದ ಸಂಚಾಲಕ ಶ್ರೀ ರಮಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಅಂಗವಾಗಿ ತಲಕಾವೇರಿ ಕ್ಷೇತ್ರದಿಂದ ತಮಿಳುನಾಡು ಪೂಂಪ್ಹಾರ್ ತನಕ ಹಮ್ಮಿಕೊಂಡ ಪಾದಯಾತ್ರೆ ನಡುವೆ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಹಲವಾರು ಕಾರಣಗಳಿಂದ ಪರಿಸರ ವಿನಾಶ ಗೊಳ್ಳುತ್ತಿದ್ದು, ‘ಜೀವನದಿ ಕಾವೇರಿ’ ಸಂಪೂರ್ಣ ಬರಡಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ನದಿ, ಪರಿಸರದ ದುರ್ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೂಲಕ ಅನಾಹುತಗಳನ್ನು ಎದುರಿಸಬೇಕಾಗ ಬಹುದು ಎಂದರು. ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಎಚ್ಚೆತ್ತುಕೊಂಡು ನದಿ, ಪರಿಸರ ಕಾಪಾಡಲು ಸಮಗ್ರ ಯೋಜನೆಗಳನ್ನು ರೂಪಿಸಬೇಕಾಗಿದೆ.
ಕೊಡಗಿನ ಭಾಗಮಂಡಲದಿಂದ ಶಿರಂಗಾಲ ಗಡಿ ತನಕ ಜೀವನದಿಯ ಒಡಲನ್ನು ಬಗೆಯುವದರೊಂದಿಗೆ ನದಿಯ ಸ್ವತ್ತು ಪರರ ಪಾಲಾಗುತ್ತಿದೆ. ನದಿ ಕಲುಷಿತಗೊಳ್ಳುವದರೊಂದಿಗೆ ಜಲಚರಗಳು ವಿನಾಶದ ಅಂಚಿಗೆ ತಲಪಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಕಾವೇರಿ ನದಿ ತಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಮಾಂಸ ತ್ಯಾಜ್ಯಗಳು ಅತಿಯಾಗಿ ಕಂಡುಬರುತ್ತಿದ್ದು, ನದಿ ನೀರು ಬಳಕೆಗೆ ಅಯೋಗ್ಯವಾಗಿದೆ. ಈ ಸಂಬಂಧ ಕೇಂದ್ರ ಸರಕಾರ ನದಿಗಳನ್ನು ರಾಷ್ಟ್ರೀಕರಣಗೊಳಿಸಿ ಸಂರಕ್ಷಿಸಬೇಕಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್ ಚಂದ್ರಮೋಹನ್, ನದಿ, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ವಿಶೇಷ ಗ್ರಾಮಸಭೆ ಕರೆಯುವದು ಹಾಗೂ ನದಿಗಳ ರಕ್ಷಣೆಗಾಗಿ ಗ್ರಾಮ ಹಂತದಲ್ಲಿ ನದಿ ಸಂರಕ್ಷಣಾ ಸಮಿತಿ ರಚನೆ ಮಾಡಲು ಸರಕಾರ ಚಿಂತಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು.
ತಲಕಾವೇರಿಯಿಂದ ಪ್ರಾರಂಭ ಗೊಂಡ ಪಾದಯಾತ್ರೆ ಜಿಲ್ಲೆಯ ಗಡಿಭಾಗದವರೆಗೆ ತೆರಳುವ ಸಂದರ್ಭ ನದಿ ತಟದ ಜನರಿಂದ, ಜನಪ್ರತಿನಿಧಿಗಳು, ಅಧಿಕಾರಿಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ಸಂಘ-ಸಂಸ್ಥೆಗಳಿಂದ ಉತ್ತಮ ಸ್ಪಂದನ ದೊರಕಿದ್ದು, ನದಿ ತಟದ ಸಮಸ್ಯೆಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ ಕಲೆ ಹಾಕಲಾಗಿದೆ. ಈ ಬಗ್ಗೆ ದಾಖಲೆಗಳನ್ನು ರಾಜ್ಯ ಹಾಗೂ ತಮಿಳುನಾಡು ಸರಕಾರಗಳು ಸೇರಿದಂತೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವದು. ಕೊಡಗು ಜಿಲ್ಲೆಯ ನದಿ-ಪರಿಸರ ಸಂರಕ್ಷಣೆಗೆ ಸಾವಿರಾರು ಕೋಟಿಗಳ ಅನುದಾನ ಒದಗಿಸಿ ಯೋಜನೆಗಳನ್ನು ರೂಪಿಸಲು ಮುಖ್ಯಮಂತ್ರಿಗಳು ಮತ್ತು ಪ್ರಧಾನಿಗಳನ್ನು ಒತ್ತಾಯಿಸಲಾಗುವದು ಎಂದರು.
ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಸ್ಥಾಪಕ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ಪ್ರಮುಖರಾದ ಅಭಯಾನಂದಪುರಿ ಸ್ವಾಮೀಜಿ, ಆರ್ಮುಗಂ ಸ್ವಾಮೀಜಿ, ಗೋಪಾಲ ಕೃಷ್ಣ ಸ್ವಾಮೀಜಿ, ಸುರೇಶಾನಂದ ಸ್ವಾಮೀಜಿ, ಕಾವೇರಿ ನದಿ ಜಾಗೃತಿ ಸಮಿತಿ ಪ್ರಮುಖರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್, ವಿ.ಎನ್. ವಸಂತ ಕುಮಾರ್, ಪಾದಯಾತ್ರೆ ಸಮಿತಿಯ ಡಿ.ಆರ್. ಸೋಮಶೇಖರ್, ಕೆ.ಜಿ. ಮನು, ಬಿ.ಎಂ. ಲತೀಶ್ ಇದ್ದರು.