ಚೆಟ್ಟಳ್ಳಿ, ಜೂ. 24: ಚೆಟ್ಟಳ್ಳಿಯ ಸಮೀಪ ಮೀನುಕೊಲ್ಲಿಯ ಒಂಟಿ ಸಲಗÀ ಹಾಗೂ ಪುಂಡಾನೆಯೊಂದನ್ನು ಅರಣ್ಯ ಇಲಾಖೆ ಹರ ಸಾಹಸದಿಂದ ಹಿಡಿದು ದುಬಾರೆಯ ಆನೆ ಶಿಬಿರದಲ್ಲಿ ತಿದ್ದಿ-ತೀಡಿ ವಾಲಿ- ಸುಗ್ರೀವರೆಂಬ ನಾಮಕರಣದೊಂದಿಗೆ ಬಂಧ ಮುಕ್ತಗೊಳಿಸಿದೆ.

ಮೂರು ತಿಂಗಳ ಹಿಂದೆ ಚೆಟ್ಟಳ್ಳಿ ಹತ್ತಿರದ ಮೀನುಕೊಲ್ಲಿ ಕಾಡಿನಿಂದ ಹೊರ ಬಂದು ಜನರಿಗೆ ಹಾಗೂ ತೋಟ-ಗದ್ದೆಗೆಲ್ಲ ಧಾಳಿ ಇಟ್ಟ ಒಂಟಿಕೊಂಬಿನ ಬೃಹತ್ ಗಾತ್ರದ ಆನೆ ಹಾಗೂ ತೋಟ ಕೆಲಸಕ್ಕೆಂದು ತೆರಳುತ್ತಿದ್ದ ಅಮೀನ ಎಂಬ ಮಹಿಳೆಯನ್ನು ಕೊಂದುಹಾಕಿದ ಆನೆಯನ್ನು ಅರಣ್ಯಾಧಿಕಾರಿ ಚಿಣ್ಣಪ್ಪ ಅವರ ಮುಂದಾಳತ್ವದಲ್ಲಿ ಸಿಬ್ಬಂದಿಗಳೊಂದಿಗೆ ಹಗಲಿರುಳು ಶ್ರಮಿಸಿ ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ ತರಲಾಗಿತ್ತು.

ಅಲ್ಲಿ ನೀಲಗಿರಿ ಮರದ ದಿಮ್ಮಿನಲ್ಲಿ ಭದ್ರಕೋಟೆಯ ಕ್ರಾಲ್ ನಿರ್ಮಿಸಿ ಅದರೊಳಗೆ ಬಂಧಿತ ಎರಡು ಆನೆಗಳನ್ನು ಬಿಟ್ಟು ಆನೆಪಾಠ ಪ್ರಾರಂಭವಾಯಿತು.

ರಾಜಾರೋಷವಾಗಿ ಸುತ್ತಾಡುತ್ತಿದ್ದ ಆನೆಗಳು ಆನೆಪಾಠಕ್ಕೆ ಬಗ್ಗದೆ ಕ್ರಾಲ್‍ನಿಂದ ಹೊರಬರಲು ಮೇಲೇರುವದು ಘೀಳಿಟ್ಟು ಪುಂಡಾಟಿಕೆ ತೋರುತ್ತಿದ್ದವು. ಪುಂಡಾಟಿಕೆಯನ್ನು ನಿಯಂತ್ರಿಸಲು ನುರಿತ ಮಾವುತರಾದ ಹರೀಶ್, ಶಂಕರ್, ರಾಜಣ್ಣ ಹಾಗೂ ವಿಜಿತ್ ಒಂದೆಡೆಯಾದರೆ ನುರಿತ ಆನೆಗಳಾದ ಅಜಯ, ಪ್ರಶಾಂತ್, ಏಕದಂತರೆಲ್ಲ ನಿರಂತರ ಕಾವಲಿದ್ದು ಪುಂಡಾಟಿಕೆ ತೋರುತ್ತಿದ್ದಾಗ ನಿಯಂತ್ರಿಸುತ್ತಿದ್ದವು.

ಮೇ 24 ರ ದಿನ ಆನೆಗಳ ಬಂಧ ಮುಕ್ತಿಗೊಳಿಸಲು ಮುಹೂರ್ತ ದಿನ ನಿಗದಿಪಡಿಸಿ ಹುಣಸೂರು ವನ್ಯಜೀವಿ ವಲಯಾಧಿಕಾರಿ ಹಾಗೂ ಆನೆಗಳ ತಜ್ಞ ಡಾ. ಉಮಾಶಂಕರ್, ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಹಾಗೂ ಬಾನಂಡ ದೇವಿಪ್ರಸಾದ್, ಅರಣ್ಯ ಸಿಬ್ಬಂದಿಗಳು ಹಾಗೂ ಮಾವುತರು ಸಿದ್ಧತೆಗೊಂಡರು. ಪೂಜೆ ಸಲ್ಲಿಸಿ ಆನೆಗಳಿಗೆ ತಿಲಕವಿಟ್ಟು ಆನೆಗಳಿಗೆ ನಿರ್ಮಿಸಿದ ಭದ್ರಕೋಟೆಯನ್ನು ತೆಗೆಯತೊಡಗಿದರು. ಮಾವುತ ಹೇಳಿದ ಭಾಷೆಯನ್ನು ಅರಿತುಕೊಳ್ಳತೊಡಗಿವೆಯಾದರೂ, ಅವುಗಳ ಕಾಲುಗಳಿಗೆ ಸರಪಳಿಯನ್ನು ಬಿಗಿದು ಸಾಕಾನೆಗಳ ಸಹಾಯದಿಂದ ಹೊರಗೆಳೆಯಲಾಯಿತು. ಆ ಸಂದರ್ಭ ಗಾಬರಿಗೊಂಡ ಆನೆಗಳು ಘೀಳಿಡುತ್ತಾ ಹೊರಬಂದು ಹತ್ತಿರವಿದ್ದವರ ಮೇಲೆ ಧಾಳಿ ಮಾಡಲು ಮುಂದಾದರೂ ಸರಪಳಿಯ ಬಂಧನದಿಂದ ನಿಯಂತ್ರಿಸಿ ಬಂಧಿಸಲಾಯಿತು.

ನಾಳೆಯಿಂದ ಮುಂದಿನ ಆನೆ ಪಾಠ ಪ್ರಾರಂಭ

ಡಾ. ಉಮಾಶಂಕರ್ ಹೇಳುವಂತೆ “ಆನೆಗಳ ಬಗ್ಗೆ ಇದುವರೆಗೆ ಹೆಚ್ಚಿನ ಗಮನ ಹರಿಸಿದ್ದೇನೆ. ರಾಮಾಯಣದಲ್ಲಿ ಬರುವ ಮುಖ್ಯ ಪಾತ್ರದ ಹೆಸರನ್ನು ಇಡುವಂತೆ ಒಂದಕ್ಕೆ ವಾಲಿ ಮತ್ತೊಂದಕ್ಕೆ ಸುಗ್ರೀವನೆಂದು ನಾಮಕರಣ ಮಾಡಲಾಗಿದೆ. ಆನೆಗಳ ಆರೋಗ್ಯ ಉತ್ತಮ ರೀತಿಯಿದ್ದು, ತರಬೇತಿಗೆ ಸ್ಪಂಧಿಸುತ್ತಿವೆ. ಆದರೆ ಗಾಬರಿಯಿಂದ ಇಂದು ಹೊರಬರಲು ತಡಕಾಡಿದವು ಎಂದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಅವರು ಆನೆಗಳ ಬಂಧ ಮುಕ್ತಿಗೊಳಿಸುವ ಸಂದರ್ಭ ಹಾಜರಿದ್ದು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಚಾರುಲತ ಮಾತನಾಡಿ, “ಹಿಂದಿನಿಂದಲೂ ಆನೆಗಳನ್ನು ಪಳಗಿಸುವ ಕಾರ್ಯ ನಡೆಯುತ್ತಿದ್ದು, ಅದರ ವೀಕ್ಷಣೆಗೆ ಬಂದಿರುವದಾಗಿ ತಿಳಿಸಿದರು.

-ವರದಿ : ಪುತ್ತರಿರ ಕರುಣ್ ಕಾಳಯ್ಯ, ಚಿತ್ರ : ಪುತ್ತರಿರ ಪಪ್ಪು ತಿಮ್ಮಯ್ಯ.