ಸೋಮವಾರಪೇಟೆ, ಜೂ. 22: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಉಂಟಾದ ಗಲಭೆಯಲ್ಲಿ ಠಾಣಾಧಿಕಾರಿಗಳು ತಮ್ಮ ಸರ್ವಿಸ್ ರಿವಾಲ್ವರ್‍ನ್ನು ಹೊರ ತೆಗೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇಂದು ಪೂರ್ವಾಹ್ನ 11.30 ರ ಸುಮಾರಿಗೆ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಸಂದರ್ಭ ಉಂಟಾದ ಗಲಭೆಯಲ್ಲಿ ಭದ್ರತೆ ಯಲ್ಲಿದ್ದ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರನ್ನು ಏಳೆಂಟು ಮಂದಿ ಪ್ರತಿಭಟನಾ ನಿರತರು ತಳ್ಳಿದ ಸಂದರ್ಭ ಕಟ್ಟೆಯ ಮೇಲೆ ಬಿದ್ದ ಪಿಎಸ್‍ಐ, ನಂತರ ಸಾವರಿಸಿಕೊಂಡು ಮೇಲೆದ್ದು ಸರ್ವಿಸ್ ರಿವಾಲ್ವರ್ ಹೊರ ತೆಗೆದು ಹಲ್ಲೆಗೆ ಪ್ರಯತ್ನಿಸಿದ ವ್ಯಕ್ತಿಗಳ ಕಡೆಗೆ ಹಿಡಿದು ಆಕ್ರೋಶ ಹೊರಹಾಕಿದರು. ತಕ್ಷಣ ಇತರ ಪೊಲೀಸ್ ಸಿಬ್ಬಂದಿಗಳು ಠಾಣಾಧಿಕಾರಿಯನ್ನು ರಕ್ಷಣೆ ಮಾಡಿ ಕಚೇರಿಯ ಒಳಭಾಗಕ್ಕೆ ಕರೆದೊಯ್ದರು.

ಕಳೆದ ತಾ. 19 ರಂದು ರಾತ್ರಿ 9.40ರ ಸುಮಾರಿಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಮೋಹನ್ ಎಂಬವರ ಮೇಲೆ ಕರೀಂ ಬೇಗ್, ಶಮೀರ್, ಬಷೀರ್ ಅವರುಗಳು ತೀವ್ರ ಹಲ್ಲೆ ನಡೆಸಿದ್ದು, ಪ್ರಮುಖ ಆರೋಪಿ ಕರೀಂ ಬೇಗ್ ತಲೆಮರೆಸಿಕೊಂಡಿದ್ದಾನೆ. ತಕ್ಷಣ ಅವನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಇವರುಗಳ ಮನವಿಯನ್ನು ಸ್ವೀಕರಿಸಲು ತಾಲೂಕು ತಹಶೀಲ್ದಾರ್ ಬಿ.ಸಿ. ಶಿವಪ್ಪ ಕಚೇರಿ ಎದುರು ಆಗಮಿಸಿದರು. ಡಿವೈಎಸ್‍ಪಿ ಟಿ. ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಪ್ರದೀಪ್, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ಕುಶಾಲನಗರದ ಮಹೇಶ್ ಹಾಗೂ ಸಿಬ್ಬಂದಿಗಳು ತಾಲೂಕು ಕಚೇರಿ ಮುಂಭಾಗ ಭದ್ರತೆಯಲ್ಲಿದ್ದರು.

ಈ ಸಂದರ್ಭ ಪ್ರಮುಖ ಆರೋಪಿ ಕರೀಂಬೇಗ್ ಬಂಧನದ ವಿಳಂಬದ ಬಗ್ಗೆ ಪ್ರತಿಭಟನಾಕಾರರು ಪ್ರಶ್ನಿಸಿದರು. ಬಂಧನಕ್ಕೆ ಪೊಲೀಸರ ತಂಡವನ್ನು ರಚಿಸಲಾಗಿದೆ. ಆರೋಪಿಯ ಶೋಧ ನಡೆಯುತ್ತಿದೆ ಎಂದು ಡಿವೈಎಸ್‍ಪಿ ಹೇಳಿದರು. ಅಧಿಕಾರಿಯ ಉತ್ತರದಿಂದ ತೃಪ್ತರಾಗದ ಪ್ರತಿಭಟನಾಕಾರರು ಪೊಲೀಸರ ವಿರುದ್ಧವೂ ಧಿಕ್ಕಾರ ಕೂಗಿದರು.

ಈ ಸಂದರ್ಭ ತಾಲೂಕು ಕಚೇರಿಯ ಮುಂಭಾಗ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿತ್ತು. ಇದೇ ಸಂದರ್ಭ ಸ್ವಲ್ಪ ಗಡ್ಡಬಿಟ್ಟಿದ್ದ ಯುವಕನೋರ್ವ ಪ್ರತಿಭಟನಾಕಾರರ ನಡುವೆ ನುಗ್ಗುತ್ತಾ ತಾಲೂಕು ಕಚೇರಿಗೆ ತೆರಳಲು ಮುಂದಾದ. ಇವನನ್ನು ಹಿಡಿದುಕೊಂಡು ಪ್ರತಿಭಟನಾಕಾರರು ಪ್ರಶ್ನಿಸುತ್ತಿದ್ದ ಸಂದರ್ಭ ಗುಂಪಿನಲ್ಲಿದ್ದ ಕೆಲವರು ಏಕಾಏಕಿ ಹಲ್ಲೆ ನಡೆಸಿದರು. ಈ ಸಂದರ್ಭ ಎಸ್.ಐ. ಅನೂಪ್ ಮಾದಪ್ಪ ಗುಂಪಿನ ನಡುವೆ ನುಗ್ಗಿ ಲಾಠಿ ಮೇಲೆತ್ತಿ ಯುವಕನನ್ನು ರಕ್ಷಿಸಲು ಮುಂದಾದರು.

ಇದರಿಂದ ಕೆರಳಿದ ಪ್ರತಿಭಟನಾ ಕಾರರು ಯುವಕನನ್ನು ಎಳೆದಾಡು ತ್ತಿದ್ದಂತೆಯೇ ಸ್ಥಳದಲ್ಲಿ ತಳ್ಳಾಟ ನೂಕಾಟ ಹೆಚ್ಚಾಯಿತು. ಗುಂಪಿನ ನಡುವೆ ಸಿಲುಕಿದ ಅನೂಪ್ ಮಾದಪ್ಪ ಅವರನ್ನು ಕೆಲವರು ತಳ್ಳಿದ ಪರಿಣಾಮ ಆಯತಪ್ಪಿ ಕೆಳಬಿದ್ದರು. ತಕ್ಷಣ ಮೇಲೆದ್ದ ಠಾಣಾಧಿಕಾರಿ ತಮ್ಮ ಬಳಿಯಿದ್ದ ರಿವಾಲ್ವರ್ ಹೊರತೆಗೆದು ಆಕ್ರೋಶದಿಂದ ಬುಸುಗುಟ್ಟ ಲಾರಂಭಿಸಿದರು.

ತಕ್ಷಣ ಡಿವೈಎಸ್‍ಪಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಅನೂಪ್ ಅವರನ್ನು ಸುತ್ತುವರೆದು ಸಮಾಧಾನಪಡಿಸಿದರು. ನಂತರ ತಾಲೂಕು ಕಚೇರಿಯ ಒಳಗೆ ಕರೆದೊಯ್ದರು. ಹೊರಭಾಗದಲ್ಲಿದ್ದ ಪ್ರತಿಭಟನಾಕಾರರು ಪೊಲೀಸ್ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆ ಸಂದರ್ಭ ರಿವಾಲ್ವರ್ ಹೊರತೆಗೆದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ಹಂತದಲ್ಲಿ ತಾಲೂಕು ಕಚೇರಿಯ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಘಟನೆಗಳು ನಡೆದ ನಂತರ ಹಲ್ಲೆಗೊಳಗಾದ ಯುವಕನ ಹೆಸರು ಚಂದ್ರಶೇಖರ್ ಎಂದು ತಿಳಿದು ಬಂತು. ಈ ಘಟನೆಯ ನಂತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರುಗಳು ಠಾಣಾಧಿಕಾರಿ ಅನೂಪ್ ಮಾದಪ್ಪ ಅವರನ್ನು ಭೇಟಿ ಮಾಡಿದರು. ಕರ್ತವ್ಯದಲ್ಲಿದ್ದ ತಾನು ಆತ್ಮರಕ್ಷಣೆಗಾಗಿ ರಿವಾಲ್ವರ್ ಹೊರ ತೆಗೆಯಬೇಕಾಯಿತು ಎಂದು ಠಾಣಾಧಿಕಾರಿ ಸ್ಪಷ್ಟನೆ ನೀಡಿದರು. ಘಟನೆಯ ಬಗ್ಗೆ ನಾವುಗಳೂ ಕ್ಷಮೆ ಕೋರಿರುವದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಲ ಮುಖಂಡರು ತಿಳಿಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು.