ಮಡಿಕೇರಿ, ಜೂ. 22 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಕೆ.ನಿಡುಗಣೆ ಗ್ರಾಮ ಪಂಚಾಯ್ತಿಗೆ ಒಳಪಡುವ 60 ಏಕರೆ ಪೈಸಾರಿ ಜಾಗದಲ್ಲಿ ‘ಲೇ ಜೌಟ್’ ನಿರ್ಮಿಸಲು ಚಿಂತನೆ ನಡೆಸಿದ್ದು, ಇದನ್ನು ಸ್ಥಳೀಯ ಗ್ರಾ.ಪಂ ತೀವ್ರವಾಗಿ ವಿರೋಧಿಸುವದಾಗಿ ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಡೀನ್ ಬೋಪಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ. ನಿಡುಗಣೆಯಲ್ಲಿ ಮೂಡಾದಿಂದ ಲೇಜೌಟ್ ನಿರ್ಮಾಣ ಕ್ಕೆಂದು ಗುರುತಿಸಿರುವ ಪ್ರದೇಶ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿದ್ದು, ನವೋದಯ ವಿದ್ಯಾಲಯವೂ ಪಕ್ಕದಲ್ಲೇ ಇದೆ. ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಕೂಡ ಇಲ್ಲೇ ಇದ್ದು, ಲೇಜೌಟ್ ನಿರ್ಮಾಣವಾದರೆ ಜಲಮೂಲಕ್ಕೆ ಧಕ್ಕೆಯಾಗುವದಲ್ಲದೆ ಕಲುಷಿತಗೊಳ್ಳುವ
ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ಕಾರಣಕ್ಕೆ ಕೆ.ನಿಡುಗಣೆ ಪಂಚಾಯ್ತಿಯ ಸರ್ವೆ ಸಂ. 1/14 ರಲ್ಲಿನ ಪೈಸಾರಿ ಜಾಗವನ್ನು ಯಾವದೇ ಕಾರಣಕ್ಕೂ ಮೂಡಾಕ್ಕೆ ನೀಡಬಾರದು ಎಂದು ಇತ್ತೀಚೆಗೆ ನಡೆದ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿರುವದಾಗಿ ತಿಳಿಸಿದರು.
ಪಂಚಾಯ್ತಿ ವ್ಯಾಪ್ತಿಯಲ್ಲೇ ಸಾಕಷ್ಟು ವಸತಿ ರಹಿತರು ಇದ್ದಾರೆ. ಆದರೆ ಜಲಮೂಲಕ್ಕೆ ದಕ್ಕೆಯಾಗುವ ಕಾರಣದಿಂದ ಉದ್ದೇಶಿತ ಜಾಗದಲ್ಲಿ ವಸತಿ ನಿರ್ಮಾಣದ ಯೋಜನೆಯನ್ನು ಕೈಗೊಳ್ಳಲಿಲ್ಲವೆಂದು ಡೀನ್ ಬೋಪಣ್ಣ ಸ್ಪಷ್ಟಪಡಿಸಿದರು.
ಮೂಡಾದಿಂದ ಲೇಜೌಟ್ ನಿರ್ಮಾಣಕ್ಕೆ ಕೆ. ನಿಡುಗಣೆಯ ಪೈಸಾರಿ ಜಾಗವನ್ನು ಗುರುತಿಸುವ ಸಂದರ್ಭ ಗ್ರಾ.ಪಂ ಹಾಗೂ ಸ್ಥಳೀಯರ ಅಭಿಪ್ರಾಯಗಳನ್ನು ಪಡೆಯದಿರುವದು ಸರಿಯಾದ ಕ್ರಮವಲ್ಲ ಎಂದರು.
ಭೂಪರಿವರ್ತನೆ ಸಂಕಷ್ಟ
ಪ್ರಸ್ತುತ ಗ್ರಾಮೀಣ ಭಾಗಗಳ ರೈತರು ತಮ್ಮ ಅವಶ್ಯಕತೆಗನುಗುಣವಾಗಿ ಸಣ್ಣ ಪುಟ್ಟ ಮನೆ, ಕೋಣೆಗಳನ್ನು ನಿರ್ಮಾಣ ಮಾಡುವಾಗ ಮೂಡಾ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಭೂ ಪರಿವರ್ತನೆ ಮಾಡಿಕೊಳ್ಳಬೇಕೆÀನ್ನುವ ಕಾನೂನು ಕಡ್ಡಾಯಗೊಂಡಿರು ವದರಿಂದ ಗ್ರಾಮೀಣ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೂವರೆ ಏಕರೆ ಒಳಗಿನ ಪ್ರದೇಶದಲ್ಲಿ ಫಾರ್ಮ್ ಹೌಸ್ನಂತಹ ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡುವ ಅಧಿಕಾರವನ್ನು ಹಿಂದಿನಂತೆ ಗ್ರಾಮ ಪಂಚಾಯ್ತಿಗಳಿಗೆ ನೀಡಬೇಕೆಂದು ಡೀನ್ ಬೋಪಣ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೀಟಾ ಮುತ್ತಣ್ಣ, ಉಪಾಧ್ಯಕೆÀ್ಷ ಜಾಜಿ ಸತೀಶ್, ಮಾಜಿ ಅಧ್ಯಕ್ಷ ಕೆ.ಪಿ. ಅಯ್ಯಪ್ಪ, ಸದಸ್ಯರಾದ ಜಾನ್ಸನ್ ಹಾಗೂ ಜಯಮ್ಮ ಉಪಸ್ಥಿತರಿದ್ದರು.