ಮಡಿಕೇರಿ, ಜೂ. 23: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಉದ್ದೇಶಿತ ಬಡಾವಣೆ ನಿರ್ಮಾಣ ಮಾಡಲು ಗ್ರಾ.ಪಂ. ಸಹಕಾರ ಅಗತ್ಯ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯ ಅಬ್ರಾರ್ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 61.78 ಎಕರೆ ಪೈಸಾರಿ ಜಾಗವಿದೆ. ಈ ಪೈಸಾರಿ ಜಾಗದಲ್ಲಿ 2002ರಿಂದ 2010ರವರೆಗೆ ಸುಮಾರು 7.7 ಎಕರೆ ಜಾಗ ಈಗಾಗಲೇ ಅಕ್ರಮ-ಸಕ್ರಮದಡಿ ವಿಲೇವಾರಿಯಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ಬಡಾವಣೆ ನಿರ್ಮಾಣ ಮಾಡಲು ಕೇವಲ 11.8 ಎಕರೆ ಜಾಗ ಮಾತ್ರ ಕೇಳಿದೆ. ಪ್ರಾಧಿಕಾರದ 2 ಸಭೆಯಲ್ಲಿ ಕೆ. ನಿಡುಗಣೆ ಪೈಸಾರಿ ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ. ಶಾಸಕರುಗಳು ಕೂಡ ಸಭೆಯಲ್ಲಿ ಹಾಜರಿದ್ದು, ಸಲಹೆ ಸಹಕಾರ ನೀಡಿದ್ದಾರೆ. ಪ್ರಾಧಿಕಾರದ ಪ್ರಸ್ತಾವನೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಎನ್‍ಓಸಿ ದೊರೆತ್ತಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆ ಯೊಂದಿಗೆ

ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಸರ್ಕಾರದಿಂದ ಒಪ್ಪಿಗೆ ದೊರೆತ ಬಳಿಕ ಸಂಬಂಧಿಸಿದ ಗ್ರಾ.ಪಂ. ಗಮನಕ್ಕೆ ತರಲಾಗುವದು ಎಂದು ಹೇಳಿದರು.

ಉದ್ದೇಶಿತ ಬಡಾವಣೆ ನಿರ್ಮಾಣದಿಂದ ಅಲ್ಲಿನ ಜಲಮೂಲಕ್ಕೆ ಯಾವದೇ ಧಕ್ಕೆಯಾಗುವದಿಲ್ಲ. ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗುವದು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಡಿಕೇರಿ ನಗರದ ಸುತ್ತಲಿನ ಸುಮಾರು 9 ಗ್ರಾಮಗಳು ಒಳಪಡಲಿದ್ದು, ವಸತಿ ಅವಶ್ಯಕತೆಯಿರುವ ಜನರಿಗೆ ಸರ್ಕಾರದಿಂದ ಕಡಿಮೆ ವೆಚ್ಚದಲ್ಲಿ ವಸತಿ ಒದಗಿಸುವದು ಪ್ರಾಧಿಕಾರದ ಉದ್ದೇಶವಾಗಿದೆ ಎಂದ ಸುರಯ್ಯಾ ಅಬ್ರಾರ್, ಪ್ರಾಧಿಕಾರದ ವ್ಯಾಪ್ತಿಗೆ ಕರ್ಣಂಗೇರಿ, ಕರವಲೆ ಬಾಡಗ, ಕೆ. ನಿಡುಗಣೆ, ಮಕ್ಕಂದೂರು, ಹೆಬ್ಬೆಟ್ಟಗೇರಿ, ಇಬ್ನಿವಳವಾಡಿ, ಕಡಗದಾಳು, ಕಾಟಕೇರಿ ಹಾಗೂ ಮೇಕೇರಿ ಗ್ರಾಮಗಳು ಸೇರಿದಂತೆ ಸುಮಾರು 9347 ಹೆಕ್ಟೇರ್ ಪ್ರದೇಶ ಒಳಪಡಲಿದೆ ಎಂದು ಹೇಳಿದರು.